ಸವಣೂರು: ಇಲ್ಲಿನ ಪೇಟೆಯಲ್ಲಿ ಕಳೆದ ಹಲವಾರು ದಿನಗಳಿಂದ ಮೀನು ಮಾರಾಟದ ವಿಚಾರದಲ್ಲಿ ತೀವ್ರ ಜಟಾಪಟಿ ನಡೆಯುತ್ತಿದ್ದು, ಹಲವಾರು ಬಾರಿ ಮಾತಿನ ಚಕಮಕಿ ಉಂಟಾಗಿ ಪೊಲೀಸರ ಮಧ್ಯಪ್ರವೇಶದಿಂದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಲಾಗುತ್ತಿತ್ತು.

ಆದ್ದರಿಂದ ಈ ಸಮಸ್ಯೆಯನ್ನು ಬಗೆಹರಿಸಲು ಪಂಚಾಯತ್ ಆಡಳಿತ ತೀರ್ಮಾನಿಸಿ, ಸಾಮಾನ್ಯ ಸಭೆಯಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಮೀನು ಮಾರಾಟದ ಹಕ್ಕನ್ನು ಏಲಂ ಮಾಡಿ ಪಂಚಾಯತ್ ವತಿಯಿಂದ ತಳ್ಳುಗಾಡಿಯ ವ್ಯವಸ್ಥೆ ಮಾಡಿ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.

ಅದರಂತೆ ಇಂದು ದಿನಾಂಕ 30ನೇ ಡಿಸೆಂಬರ್ ಗುರುವಾರ ಪಂಚಾಯತ್ ಕಟ್ಟಡದಲ್ಲಿರುವ ಕುಮಾರಧಾರ ಸಭಾಂಗಣದಲ್ಲಿ ಏಲಂ ಪ್ರಕ್ರಿಯೆಯನ್ನು ಏರ್ಪಡಿಸಲಾಗಿದೆ. ಆದರೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸದೆ ಪಂಚಾಯತ್ ಆಡಳಿತ ಮಾರಾಟದ ಹಕ್ಕನ್ನು ಏಲಂ ಮಾಡಲು ಹೊರಟಿರುವುದು ಹಾಸ್ಯಾಸ್ಪದ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಏಲಂ ಪ್ರಕ್ರಿಯೆಯು ತೀವ್ರ ಚರ್ಚೆಗೆ ಗ್ರಾಸವಾಗುವ ಸಂಭವವಿರುವುದರಿಂದ ಗ್ರಾಮಸ್ಥರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.ಆದ್ದರಿಂದ ಈ ಸಭೆಗೆ ಗಣನೀಯ ಪ್ರಮಾಣದಲ್ಲಿ ಗ್ರಾಮಸ್ಥರು ಜಮಾಯಿಸಿದ್ದಾರೆ.

ವರದಿ:ಸಫ್ವಾನ್ ಸವಣೂರು