ಕೊನೆಗೂ ಹರಾಜಾದ ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಸಿಮೀನು ಮಾರಾಟದ ಹಕ್ಕು…!
ವಾರ್ಷಿಕ ಬರೋಬ್ಬರಿ ಏಳು ಲಕ್ಷದ ಅರುವತ್ತೈದು ಸಾವಿರಕ್ಕೆ ಹರಾಜು…!!
ಸವಣೂರಿನ ಜನತೆಗೆ ದುಬಾರಿಯಾಗಲಿದೆಯೇ ಹಸಿಮೀನು…!
ಸವಣೂರು: ಕಳೆದ ಹಲವಾರು ದಿನಗಳಿಂದ ವಿವಾದಕ್ಕೊಳಗಾಗುತ್ತಿದ್ದ ಸವಣೂರು ಪೇಟೆಯ ಹಸಿಮೀನು ಮಾರಾಟ ವಿವಾದ ಕೊನೆಗೂ ಅಂತ್ಯಕಂಡಿದೆ. ಇಂದು ಪಂಚಾಯತಿನ ಕುಮಾರಧಾರ ಸಭಾಂಗಣದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ವಾರ್ಷಿಕ ಬರೋಬ್ಬರಿ ಏಳು ಲಕ್ಷದ ಅರುವತ್ತೈದು ಸಾವಿರಕ್ಕೆ ಪಿ. ಅಬೂಬಕ್ಕರ್ ಎಂಬವರು ಮಾರಾಟದ ಹಕ್ಕನ್ನು ಪಡೆದುಕೊಂಡಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಈ ಹರಾಜು ಪ್ರಕ್ರಿಯೆಯಲ್ಲಿ ಸುಮಾರು ಹನ್ನೆರಡು ಮಂದಿ ಬಿಡ್ಡುದಾರರು ಭಾಗವಹಿಸಿದ್ದರು. ವಾರ್ಷಿಕ ಹತ್ತು ಸಾವಿರಕ್ಕೆ ಆರಂಭವಾದ ಹರಾಜು ಪ್ರಕ್ರಿಯೆ ತೀವ್ರ ಪೈಪೋಟಿಯ ಕಾರಣ ಕೊನೆಗೆ ಏಳು ಲಕ್ಷದ ಅರುವತ್ತೈದು ಸಾವಿರಕ್ಕೆ ಅಂತಿಮಗೊಂಡಿತು. ಪಂಚಾಯತ್ ವತಿಯಿಂದ ನೀಡಲಾಗುವ ತಳ್ಳುಗಾಡಿಯಲ್ಲಿ ಸವಣೂರು ಪೇಟೆಯಲ್ಲಿ ಹಾಗೂ
ಸವಣೂರು ಮತ್ತು ಪುಣ್ಚಪ್ಪಾಡಿ ಗ್ರಾಮದ ವ್ಯಾಪ್ತಿಯಲ್ಲಿ ತಲಾ ಒಂದರಂತೆ ಒಟ್ಟು ಮೂರು ಜಾಗದಲ್ಲಿ ಮೀನು ಮಾರಾಟ ನಡೆಸಲು ಈ ಮೂಲಕ ಏಲಂ ವಹಿಸಿಕೊಂಡವರಿಗೆ ಅವಕಾಶವಿದೆ. ಅಷ್ಟೇ ಅಲ್ಲದೆ ಪಂಚಾಯತ್ ವ್ಯಾಪ್ತಿಯ ಮನೆಮನೆಗೆ ತೆರಳಿ ಹಸಿಮೀನು ವ್ಯಾಪಾರ ನಡೆಸುವ ಹಕ್ಕನ್ನೂ ಇದು ಒಳಗೊಂಡಿದೆ.
ಅದೇ ರೀತಿ ಸವಣೂರು ಗ್ರಾಮ ಪಂಚಾಯತಿಗೊಳಪಟ್ಟ ಪಾಲ್ತಾಡಿ ಗ್ರಾಮದ ವ್ಯಾಪ್ತಿಯಲ್ಲಿ ಮೀನು ಮಾರಾಟ ನಡೆಸುವ ಹಕ್ಕಿಗೆ ಪ್ರತ್ಯೇಕ ಬಿಡ್ ಕರೆಯಲಾಗಿತ್ತು. ಆದರೆ ಸಾರ್ವಜನಿಕರಿಂದ ಅಷ್ಟೇನೂ ಆಸಕ್ತಿ ವ್ಯಕ್ತವಾಗದ ಕಾರಣ ಬರೇ ಇಪ್ಪತ್ತೈದು ಸಾವಿರ ರೂಪಾಯಿಗಳಿಗೆ ಆ ಹರಾಜು ಅಂತಿಮಗೊಂಡಿತು.
ಸದರಿ ಸಭೆಯಲ್ಲಿ ಪಾಲ್ತಾಡಿ ಗ್ರಾಮದ ಪಂಚಾಯತ್ ಕಟ್ಟಡದಲ್ಲಿ ಕೋಳಿ ಮಾರಾಟದ ಅಂಗಡಿಯ ಏಲಂ ಹಾಗೂ ಪಂಚಾಯತ್ ವ್ಯಾಪ್ತಿಯ ಬಸ್ ತಂಗುದಾಣಗಳಲ್ಲಿನ ಅಂಗಡಿ ಕೋಣೆಗಳ ಏಲಂ ಕೂಡಾ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ರಾಜೀವಿ ವಿ ಶೆಟ್ಟಿ ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಬಿ ಹರಾಜು ಪ್ರಕ್ರಿಯೆ ನಡೆಸಿದರು. ಪಂಚಾಯತ್ ಉಪಾಧ್ಯಕ್ಷರು ಮತ್ತು ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ನೆರೆದಿದ್ದರು.
ಈ ಹರಾಜು ಪ್ರಕ್ರಿಯೆ ಸವಣೂರಿನ ನಾಗರಿಕರ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾರಣವೇನೆಂದರೆ ಸವಣೂರು ಪೇಟೆಯಲ್ಲಿ ಈಗಾಗಲೇ ಮೂರು ಕಡೆ ಮೀನು ಮಾರಾಟ ನಡೆಯುತ್ತಿದ್ದು, ಇನ್ನು ಮುಂದೆ ಪಂಚಾಯತ್ ಸೂಚಿಸಿದ ಜಾಗದಲ್ಲಿ ಮಾತ್ರವೇ ಮೀನು ಮಾರಾಟ ನಡೆಸಬೇಕು. ಅಷ್ಟೇ ಅಲ್ಲದೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಸವಣೂರಿನಲ್ಲಿ ಲಕ್ಷಾಂತರ ರೂಪಾಯಿಗೆ ಮಾರಾಟದ ಹಕ್ಕನ್ನು ಪಡೆದುಕೊಂಡವರು ಯಾವ ರೀತಿಯಲ್ಲಿ ಮಾರಾಟ ನಡೆಸಬಹುದು ,
ಸವಣೂರಿನ ಜನತೆಯ ಪಾಲಿಗೆ ಮೀನು ದುಬಾರಿಯಾಗಲಿದೆಯೇ ಎಂಬ ಪ್ರಶ್ನೆ ಸಹಜವಾಗಿ ಜನರಲ್ಲಿ ಮನೆ ಮಾಡಿದೆ.
ವರದಿ: ಸಫ್ವಾನ್ ಸವಣೂರು