ಬೆಂಗಳೂರು: ಕರ್ನಾಟಕ ಬಂದ್ ಎಂದು ಕರೆ ನೀಡಿದ್ದ ಸಂಘಟನೆಗಳ ಜೊತೆ ಸೇರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನ್ನಡ ಪರ ಸಂಘಟನೆಗಳ ನಾಯಕರ ಮಾತುಕತೆಗಳ ಬಳಿಕ ನಾಳಿನ ರಾಜ್ಯ ಬಂದ್ ಅನ್ನು ವಾಪಸ್ ಪಡೆದಿದ್ದಾಗಿ ಕನ್ನಡ ಪರ ಹೋರಾಟಗಾರರು ಘೋಷಿಸಿದ್ದಾರೆ.

ಎಂಇಎಸ್ ನಿಷೇಧಿಸಬೇಕು ಅನ್ನೋ ಒತ್ತಾಯವನ್ನು ಮುಂದಿರಿಸಿ ಡಿಸೆಂಬರ್ 31ರಂದು ಕೆಲವು ಕನ್ನಡ ಪರ ಸಂಘಟನೆಗಳು ಕಳೆದ ಕೆಲ ದಿನಗಳ ಹಿಂದೆ ಬಂದ್‌ಗೆ ಕರೆ ನೀಡಿದ್ದವು.
ಕನ್ನಡ ಪರ ಸಂಘಟನೆಗಳ ಬಂದ್ ಗೆ ನಾಡಿನ ಹಲವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಇಂದು ನಗರದ ಗೃಹ ಕಚೇರಿ ಕೃಷ್ಣಾದಲ್ಲಿ ವಾಟಾಳ್ ನಾಗರಾಜ್, ಸಾರಾ ಗೋವಿಂದು ಸಹಿತ ಹಲವು ನಾಯಕರ ಜೊತೆ ಸಿಎಂ ಮಾತುಕತೆ ನಡೆಸಿದರು. ಈ ಸಂದರ್ಭ ಎಂಇಎಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡುವ ಮೂಲಕ ಹೋರಾಟಗಾರರ ಮನವೊಲಿಸುವಲ್ಲಿ ಸಿಎಂ ಸಫಲರಾದರು.
ಆದ್ದರಿಂದ ನಾಳೆ ಕರೆ ನೀಡಿದ್ದ ಬಂದ್ ಅನ್ನು ಅಧಿಕೃತವಾಗಿ ಕನ್ನಡ ಪರ ಸಂಘಟನೆಗಳು ವಾಪಸ್ ಪಡೆದಿವೆ.
ಅದಾಗ್ಯೂ, ನಗರದ ಟೌನ್ ಹಾಲ್ ನಿಂದ ಬೃಹತ್ ಪ್ರತಿಭಟನಾ ಜಾಥಾ ನಡೆಸುವುದಾಗಿ ವಾಟಾಳ್ ನಾಗರಾಜ್ ತದನಂತರ ಘೋಷಿಸಿದ್ದಾರೆ.