ಬೆಂಗಳೂರು: ಸ್ಥಳೀಯ ಎಲ್ಲಾ ಚುನಾವಣೆ ಫಲಿತಾಂಶ ಗಮನಿಸಿದಾಗ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಇಂದು ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿಯುವುದು ನೂರಕ್ಕೆ ನೂರು ಖಚಿತ ಎಂದರು.
ಈ ಹಿಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾವು ಮತ್ತು ಬಿಜೆಪಿ ಎರಡೂ ಪಕ್ಷಗಳು ತಲಾ ಹನ್ನೊಂದು ಸ್ಥಾನಗಳನ್ನು ಗೆದ್ದಿದ್ದರೂ ಶೇಕಡಾವಾರು ಮತಗಳ ಪ್ರಮಾಣ ನಮಗೆ ಹೆಚ್ಚು ಬಂದಿದೆ. ನಮಗೆ 48% ಮತ ಬಂದಿದ್ದರೆ, ಬಿಜೆಪಿ ಗೆ 41% ಬಂದಿತ್ತು. ಡಿಸೆಂಬರ್ 27 ರಂದು 1187 ಸ್ಥಾನಗಳಿಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಪಕ್ಷ 500 ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 430, ಜೆ.ಡಿ.ಎಸ್ 45, ಇತರೆ 207 ಸ್ಥಾನಗಳನ್ನು ಗೆದ್ದಿದ್ದಾರೆ. ಈ ಫಲಿತಾಂಶದಿಂದ ಬಿಜೆಪಿಯ ವಿರುದ್ಧ ಜನಾಭಿಪ್ರಾಯ ಇದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಜನ ಭಾವಿಸಿರುವುದು ಎದ್ದು ಕಾಣುತ್ತಿದೆ ಎಂದು ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ, ಮತ ನೀಡಿದ ಎಲ್ಲಾ ಮತದಾರರಿಗೆ ಮತ್ತು ಅಭ್ಯರ್ಥಿಗಳ ಪರವಾಗಿ ದುಡಿದ ಎಲ್ಲಾ ನಾಯಕರು, ಕಾರ್ಯಕರ್ತರಿಗೆ ವೈಯಕ್ತಿಕವಾಗಿ ಮತ್ತು ಪಕ್ಷದ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ. ಗೆದ್ದಿರುವ ಅಭ್ಯರ್ಥಿಗಳಿಗೆ ಅಭಿನಂದನೆಗಳು ಎಂದು ಸಿದ್ದರಾಮಯ್ಯ ತಿಳಿಸಿದರು.