ಮಂಗಳೂರು: ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದ್ದು, ಅನಗತ್ಯ ವಾಹನಗಳ ಸಂಚಾರಕ್ಕೆ ತಡೆ ನೀಡಿದ್ದಾರೆ.

ಮಂಗಳೂರು ನಗರ ಪ್ರವೇಶಿಸುವ ಪ್ರಮುಖ ಸ್ಥಳಗಳು ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ರಸ್ತೆಗೆ ಬ್ಯಾರಿಕೇಡ್ ಅಳವಡಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಈ ಒಂದು ಕ್ರಮ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರ ನೇತೃತ್ವದಲ್ಲಿಯೇ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪ್ರಮುಖವಾದ ಜಂಕ್ಷನ್‌ಗಳಲ್ಲಿ ಬಿಗು ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಮುಂಜಾನೆ ಕೂಡಾ ನಗರದ ಹಲವು ಕಡೆಗಳಲ್ಲಿ ಖುದ್ದು ಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕದ್ರಿ, ಸರ್ಕ್ಯೂಟ್‌ನಲ್ಲಿ ಕಮಿಷನರ್ ಅವರು ಬಸ್ಸಿನೊಳಗೆ ಹೋಗಿ ಪ್ರಯಾಣಿಕರ ತಪಾಸಣೆ ನಡೆಸಿದರು.
ಅಲ್ಲಿ ಮಾಸ್ಕ್ ಧರಿಸದೇ ಇರುವವರನ್ನು ಕಂಡು ಎಚ್ಚರಿಕೆ ನೀಡಿದರು. ಸಾಮೂಹಿಕವಾಗಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಎಲ್ಲರೂ ಖಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.