ಮಂಗಳೂರು: ಹಾಡಹಗಲೇ ಮೊಬೈಲ್ ಕಳ್ಳತನ ಮಾಡಿದ ಕಳ್ಳನನ್ನು ಪೊಲೀಸ್ ಅಧಿಕಾರಿಯೋರ್ವರು ಸಿನಿಮೀಯಾ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಘಟನೆಯು ನಗರದ ಹೃದಯಭಾಗದ ಸ್ಟೇಟ್‌ಬ್ಯಾಂಕ್ ಬಳಿ ನಡೆದಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿನ್ನೆ ಮಧ್ಯಾಹ್ನ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಮುಂಭಾಗದ ನೆಹರು ಮೈದಾನದಲ್ಲಿ ಉತ್ತರಪ್ರದೇಶ ಮೂಲದ ಗ್ರಾನೈಟ್ ಕೆಲಸ ಮಾಡುವ ವ್ಯಕ್ತಿಯೋರ್ವನ ಮೊಬೈಲ್ ಕಳವು ಮಾಡಿ ಪರಾರಿಯಾಗಿದ್ದನು.
ತಕ್ಷಣವೇ ಆತ ಹಾಗೂ ಸ್ಥಳೀಯರು ಎಚ್ಚೆತ್ತು ಬೊಬ್ಬೆ ಹಾಕಿ ಕಳ್ಳನನ್ನು ಓಡಿಸಿಕೊಂಡು ಹೋಗಿದ್ದಾರೆ. ಈ ಸಂದರ್ಭ ಕಮೀಷನರೇಟ್ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಎಸ್‌ಐ ವರುಣ್ ಅವರು ಗಮನಿಸಿ ಸಿನಿಮೀಯ ರೀತಿಯಲ್ಲಿ ಆತನ ಬೆನ್ನಟ್ಟಿದ್ದಾರೆ.
ಆತ ಹ್ಯಾಮಿಲ್ಟನ್ ಸರ್ಕಲ್ ಬಳಿ ತಲುಪುತ್ತಿದ್ದಂತೆ ಆತನನ್ನು ನೆಲಕ್ಕೆ ಕೆಡವಿ ಹಿಡಿದಿದ್ದಾರೆ. ಕಳ್ಳತನದಲ್ಲಿ ಮೂವರು ಭಾಗಿಯಾಗಿದ್ದಾರೆ. ಮತ್ತೋರ್ವ ಕಳ್ಳನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ನೆಟ್ಟಿಗರು ಪೊಲೀಸ್ ಅಧಿಕಾರಿ ವರುಣ್ ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸಹ ಹಂಚಿಕೊಂಡಿದ್ದಾರೆ.