dtvkannada

ಪ್ರೀತಿ ಎಂದರೆ ಹಾಗೆ ಅದೇನೋ ಒಂದು ಸುಮಧುರ ಭಾವ..ಅದನ್ನು ಜೀವಿಸುವ ಪ್ರತಿ ಜೀವಿಗಳಿಗೂ ಅದೋಂಥರಾ ಭೂ ಲೋಕದ ಮೇಲಿನ ಅತೀ ಸುಂದರ ಬಾಂಧವ್ಯ. ಬೆಳಕಿಲ್ಲದ ದಾರಿಯಲ್ಲಿ ನಡೆಯುವೆ ಆದರೆ ಪ್ರೀತಿಯೇ ಇಲ್ಲದ ದುರ್ಗಮ ದಾರಿಯಲ್ಲಿ ನಡೆಯಲು ಆಗೋದಿಲ್ಲ ಎಂಬುದು ಪ್ರತಿ ಪ್ರೇಮಿಯ ಹೃದಯಾಂತಾರದಲ್ಲಿನ ಅಡಿಬರಹ..ಇಂತಹ ಅಗೋಚರ ಪ್ರೀತಿಗೆ ಬಿದ್ದು ವ್ಯಕ್ತಿಯೊಬ್ಬರು ತಮ್ಮ ಬಾಳನ್ನೇ ಕತ್ತಲಾಗಿಸಿಕೊಂಡಂತಹ ದುರ್ಘಟನೆಯೊಂದು ನಡೆದು ಹೋಗಿದೆ.ಹೌದು.. ನಾವೇಕೆ ಹೀಗೆ ಹೇಳ್ತಾ ಇದ್ದಿವಿ ಅಂತಾ ನಿಮಗೆ ಅನ್ನಿಸಿದರೆ ಈ ಸ್ಟೋರಿ ಅದಕ್ಕೆ ಉತ್ತರವಾಗಿ ನಿಲ್ಲಬಹುದೇನೋ. ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು ಅನ್ನೋ ಒಂದು ಗಾದೆಯಿದೆ. ಈ ಪ್ರೀತಿಯಲ್ಲಿ ಮುಳುಗಿದವರಿಗೆ ಜಗತ್ತೆ ಕಾಣೋದಿಲ್ಲ ಅನ್ನೋದು ಈ ವಿಷಯದಲ್ಲಿ ಪಕ್ಕಾ ಗೊತ್ತಾಗುತ್ತೆ. ಹೀಗೆ ತನ್ನ ಪ್ರಿಯತಮೆಯ ತಾಯಿಗಾಗಿ ಪ್ರಿಯಕರನೊಬ್ಬ ತನ್ನ ಕಿಡ್ನಿಯನ್ನೆ ದಾನ ಮಾಡಿ, ಪ್ರೀತಿ ಅಂದರೆ ಏನು ಅಂತಾ ಕೇಳುವವರಿಗೆ ಅದರ ಸಾರಾಂಶವನ್ನು ಸಾರಿದ್ದಾನೆ. ಆದರೆ ಅದೇ ಸಾರಾಂಶ ಅವನ ಬಾಳಲ್ಲಿ ವಿಲನ್ ಆಗಿ ನಿಂತಿದೆ ಅಂದರೆ ನೀವು ನಂಬಲೇ ಬೇಕು.

ಅಷ್ಟಕ್ಕೂ ಈ ಮಾದರಿ ಪ್ರೇಮಿಯ ಬಾಳಲ್ಲಿ ನಡೆದಿದ್ದಾರೇನು..?

ಕ್ಯಾಲಿಪೋರ್ನಿಯಾ ಮೂಲದ ಉಜೈಲ್ ಮಾರ್ಟಿನ್ ಎಂಬ ವ್ಯಕ್ತಿ ತನ್ನ ಪ್ರಿಯತಮೆಯ ತಾಯಿಗಾಗಿ ಕಿಡ್ನಿ ದಾನ ಮಾಡಿ ಸುದ್ದಿಯಲ್ಲಿದ್ದಾನೆ. ಪ್ರಿಯತಮೆಯ ತಾಯಿಗೆ ಅನಾರೋಗ್ಯದ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಿಸಲಾಗಿರುತ್ತೆ. ಈ ವೇಳೆ ವೈದ್ಯರು ಹೊಸ ಕಿಡ್ನಿಯನ್ನು ಜೋಡಿಸಬೇಕಾಗುತ್ತೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಮಾರ್ಟಿನ್ ಹಿಂದು-ಮುಂದೂ ನೋಡದೆ ಎಷ್ಟೇ ಆದರು ನನ್ನ ಭಾವಿ ಅತ್ತೆಯಲ್ಲವೇ..! 2 ಕಿಡ್ನಿಯಲ್ಲಿ 1 ಕಿಡ್ನಿಯನ್ನು ಕೊಡೋದಾಗಿ ಹೇಳಿ ಕಿಡ್ನಿ ದಾನ ಮಾಡುತ್ತಾನೆ. ಅದಾದ ಬಳಿಕ ಸಹಜವಾಗಿ ತಾನು ಅವಳನ್ನ ಎಷ್ಟು ಪ್ರೀತಿಸುತ್ತೇನೆ ಎಂದು ಈ ಮೂಲಕ ತೋರಿಸಿದೆ ಎಂಬ ಸಾರ್ಥಕ ಭಾವಕ್ಕೆ ಒಳಗಾಗಿರುತ್ತಾನೆ. ಅದಾದ ತಿಂಗಳಲ್ಲಿ ಅವನ ಬಾಳಲ್ಲಿ ಅಕ್ಷರಶಃ ಸಿಡಿಲು ಬಡಿದದ್ದಕ್ಕಿಂತಲೂ, ಎರಡು ಪಟ್ಟು ಪರಿಣಾಮದ ದುರಂತವೊಂದು ನಡೆದು ಹೋಗಿರುತ್ತೆ.ಬೇರೆ ಲವರ್ ಜೊತೆ ಎಂಗೇಜ್ ಆದ ಪ್ರಿಯತಮೆ..!
ಯಶಸ್ವಿ ಕಿಡ್ನಿ ಜೋಡಣೆಯಾದ ಬರೋಬ್ಬರಿ ಒಂದು ತಿಂಗಳ ಬಳಿಕ ತನ್ನ ಪ್ರಿಯತಮೆ ಬೇರೆಯೊಬ್ಬನ ಕೈ ಹಿಡಿದು ಶಾಕ್ ನೀಡಿದ್ದಾಳೆ. ಒಂದೇ ಕಿಡ್ನಿಯವನನ್ನ ಕಟ್ಟಿಕೊಂಡು ನಾನೇನು ಮಾಡಲಿ? ಆತನೊಂದಿಗೆ ಬದುಕೋಕೆ ಸಾಧ್ಯಾನಾ? ಅಂತ ಆಕೆ ಇಂಥ ನಿರ್ಧಾರ ಕೈಗೊಂಡಿದ್ದಾಳೆ ಎನ್ನಲಾಗ್ತಿದೆ.

ಹೌದು ಪ್ರಿಯತಮೆ ಮೇಲಿನ ಪ್ರೀತಿಗಾಗಿ ಆಕೆಯ ತಾಯಿಗೆ ಕಿಡ್ನಿ ದಾನ ಮಾಡಿ ಪ್ರೀತಿ ಮಧುರ, ತ್ಯಾಗ ಅಮರ ಎಂದಿದ್ದ ಪ್ರೇಮಿಯನ್ನು ಬಿಟ್ಟು ಆಕೆ ಬೇರೊಬ್ಬನ ಜೊತೆ ವಿವಾಹವಾಗಿರುತ್ತಾಳೆ. ಈ ಸುದ್ದಿ ತಿಳಿಯುತ್ತಿದ್ದಂತೆ ಪ್ರಿಯತಮ ಮಾರ್ಟಿನ್ ಸುಸ್ತಾಗಿ ಹೋಗಿದ್ದಾರೆ. ಕೆಲ ದಿನಗಳ ಬಳಿಕ ಈ ಘೋರ ಆಘಾತದಿಂದ ಹೊರಬಂದು ಟಿಕ್ಟಾಕ್ ವಿಡಿಯೋದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಕಿಡ್ನಿ ದಾನ ಮಾಡಿದ ಪ್ರೇಮಿಗೆ ಸಿಕ್ತು ನೆಟಿಜೆನ್ಸ್ ಸಪೋರ್ಟ್..!ಇನ್ನು ಈ ವಿಷಯ ಟಿಕ್ಟಾಕ್ನಲ್ಲಿ ವೈರಲ್ ಆಗುತ್ತಿದ್ದಂತೆ ಮಿಲಿಯನ್ಗಟ್ಟಲೇ ಜನ ಈ ಮಧುರ ಪ್ರೇಮಿಯ ಬೆಂಬಲಕ್ಕೆ ನಿಂತಿದ್ದಾರೆ. ‘ಚಿಂತಿಸಬೇಡಿ ಅವಳು ನಿಮ್ಮನ್ನು ಕಳೆದುಕೊಂಡಿಲ್ಲ. ಒಂದು ಒಳ್ಳೆಯ ವ್ಯಕ್ತಿತ್ವನ್ನು ಕಳೆದುಕೊಂಡಿದ್ದಾಳೆ’ ಎಂದು ನೈತಿಕ ಬೆಂಬಲ ತೋರಿದ್ದಾರೆ.  ‘ನಿಮ್ಮ ಈ ಔದಾರ್ಯವನ್ನು ವರ್ಣಿಸಲು ಪದಗಳು ಸಾಲದು ನೀವು ಎಲ್ಲ ಪ್ರೇಮಿಗಳಿಗೂ ಮಾದರಿ’ ಎಂದು ಕೊಂಡಾಡಿದ್ದಾರೆ.  ಸದ್ಯ ಈ ಮಹಾ ದುರಂತದದಿಂದ ಮೆಲ್ಲನೆ ಹೊರ ಬರುತ್ತಿರುವ ಪ್ರೇಮಿ, ‘ನಾನು ಒಂದು ಕಿಡ್ನಿಯನ್ನು ಮಾತ್ರ ಕಳೆದುಕೊಂಡಿದ್ದೇನೆ, ಆದ್ರೆ ಇನ್ನೊಂದು ಕಿಡ್ನಿ ನನ್ನ ಬಳಿಯೇ ಇದ್ದು ಅದರೊಂದಿಗೆ ನಾನು ಜೀವಿಸುತ್ತಿದ್ದೇನೆ. ಅದರಲ್ಲಿಯೇ ನಾನು ಖುಷಿ ಕಾಣುತ್ತೇನೆ. ಬಿಟ್ಟು ಹೋದವರ ಬಗ್ಗೆ ನಾನು ಈಗ ಚಿಂತಿಸುವುದಿಲ್ಲ’ ಎಂದಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!