ಬೆಂಗಳೂರು: ಇದೇ ಜನವರಿ 30ರ ಗಾಂದಿಜೀಯವರ ಪುಣ್ಯತಿಥಿಯಂದು “ನಾನೇಕೆ ಗಾಂದಿಯನ್ನು ಕೊಂದೆ” ಚಲನಚಿತ್ರ ಬಿಡುಗಡೆಗೊಳ್ಳಲಿದೆ. ಪ್ರಸ್ತುತ ಸಿನೇಮಾ ಬಿಡುಗಡೆಗೆ ಅವಕಾಶ ನೀಡದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಯಂಗ್ ಬ್ರಿಗೇಡ್ ರಾಜ್ಯಾಧ್ಯಕ್ಷ ಜುನೈದ್ ಪಿಕೆ ಇವರ ನೇತ್ರತ್ವದಲ್ಲಿ ಮನವಿ ಸಲ್ಲಿಸಿದೆ.

ಕರ್ನಾಟಕ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಹಾತ್ಮ ಗಾಂಧೀಜಿ ಅವರನ್ನು ವಿರೋಧಿಸುವ ʼನಾನೇಕೆ ಗಾಂಧಿಯನ್ನು ಕೊಂದೆʼ ಸಿನಿಮಾ ಬಿಡುಗಡೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅವಕಾಶ ನೀಡಬಾರದು.
ಇದೇ ಜನವರಿ 30 ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯತಿಥಿ ದಿನದಿಂದು ಈ ಸಿನಿಮಾ ಬಿಡುಗಡೆಯಾಗಲಿದೆ.ಹಾಗಾಗಿ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಇಂತಹ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು.
ಪ್ರಮುಖವಾಗಿ ಜ.30 ರಂದು ಚಿತ್ರಮಂದಿರ ಹಾಗೂ ಓಟಿಟಿ ವೇದಿಕೆಗಳಲ್ಲಿ ʼನಾನೇಕೆ ಗಾಂಧಿಯನ್ನು ಕೊಂದೆʼ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಒಂದೆಡೆ ಅಹಿಂಸೆ, ಶಾಂತಿಗಾಗಿ ಗಾಂಧೀಜಿ ಅವರ ಪುಣ್ಯತಿಥಿ ಆಚರಿಸಿದರೆ, ಮತ್ತೊಂದೆಡೆ ʼನಾನೇಕೆ ಗಾಂಧಿಯನ್ನು ಕೊಂದೆʼ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ.
ಮಹಾತ್ಮರವರು ಮೂರು ಗುಂಡಿನಿಂದ ಹುತಾತ್ಮರಾದ ಮೇಲೆ ಸೈದ್ಧಾಂತಿಕವಾಗಿ ಮಹಾತ್ಮನ ಚರಿತ್ರೆಯ ಮೇಲೆ ಗುಂಡು ಹಾರಿಸುತ್ತಲೇ ಇದ್ದಾರೆ. ಆದರೆ ಸಂವಿಧಾನ ಬದ್ಧ ಜನರು ಮಹಾತ್ಮನನ್ನು ಇಂದಿಗೂ ರಕ್ಷಿಸುತ್ತಲೇ ಬಂದಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಂಪೂರ್ಣ ಗೌರವ ಇರುವ ಸಲುವಾಗಿ ಜನರಲ್ಲಿ ಕೋಮುಸೌಹಾರ್ದ ಕೊಲ್ಲುವ, ಜಾತೀಯ ಶ್ರೇಣಿಕೃತ ವ್ಯವಸ್ಥೆ ಬೆಂಬಲಿಸುವಂತೆ ಪ್ರೇರೇಪಿಸುವ ಇಂತಹ ಸಿನಿಮಾಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮಾಧಿ ಮಾಡುವ ಬುನಾದಿಯಾಗಿದೆ.
ಮಹಾತ್ಮ ಗಾಂಧೀಜಿಯವರ ಅನುಯಾಯಿಗಳಾದ ನಾವು ಮಹಾತ್ಮನನ್ನು ಗುಂಡಿಟ್ಟು ಕೊಂದ ಹೇಡಿಯನ್ನು ಸದಾ ವಿರೋಧಿಸಿ ಸಂವಿಧಾನಾತ್ಮಕವಾದ ಪ್ರಜೆಯ ಮೂಲಭೂತ ಕರ್ತವ್ಯಗಳನ್ನು ಪಾಲಿಸುತ್ತಿದ್ದೇವೆ. ಹದಗೆಡುತ್ತಿರುವ ಸಮಾಜದ ಸೌಹಾರ್ದತೆಯನ್ನು ಹಾಗೂ ಸಾಮಾಜಿಕ ಸಾಮರಸ್ಯ ಪುನಃ ಪ್ರತಿಷ್ಠಾಪಿಸಲು ಮಹಾತ್ಮನ ವಿಚಾರ ದೇಶದ ಮೂಲೆ ಮೂಲೆಗಳಲ್ಲೂ ತಲುಪಿಸಬೇಕಾಗಿದೆ ಹೊರತು ಹೇಡಿಯಾದ ಕೊಲೆಗಡುಕ ಗೋಡ್ಸೆಯ ದೃಷ್ಟಿಕೋನಗಳನ್ನಲ್ಲ!
ಸಮಾಜದ ಸೌಹಾರ್ದತೆಗಾಗಿ ಹಾಗೂ ಕೋಮು ಸೌಹಾರ್ದತೆಗಾಗಿ ಈ ಚಲನಚಿತ್ರದ ಬಿಡುಗಡೆಯನ್ನು ನಿಷೇಧಿಸುವಂತೆ ಆಗ್ರಹಿಸುತ್ತೇವೆ, ನಮ್ಮ ಆಗ್ರಹ ಕೇಳದಿದ್ದಲ್ಲಿ ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸುತ್ತೇವೆ ಎಂದು ಮನವಿಯಲ್ಲಿ ಯಂಗ್ ಬ್ರಿಗೇಡ್ ಆಗ್ರಹಿಸಿದೆ.