ಮಂಗಳೂರು: ಸರ್ವ ಧರ್ಮ ಸಮನ್ವಯದ ಪ್ರವಚನಕಾರರೂ, ಭಾವೈಕ್ಯತೆಯ ಹರಿಕಾರರೂ, ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಎನ್. ಸುತಾರರವರು ಹೃದಯಾಘಾತದಿಂದ ನಿಧನರಾಗಿದ್ದು, ಅವರ ನಿಧನಕ್ಕೆ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಟ್ರಸ್ಟ್ ಸಂತಾಪ ವ್ಯಕ್ತಪಡಿಸಿದೆ.
ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ರವರ ನಿಧನದಿಂದ ಕನ್ನಡದ ನಾಡುನುಡಿ ಮತ್ತು ದೇಶಕ್ಕೇ ತುಂಬಲಾರದ ನಷ್ಟವಾಗಿದೆ. ಅವರ ಭಾವೈಕ್ಯ ಬದುಕು ಸಂದೇಶ ಚಿರಾಯುವಾಗಲಿ ಎಂದು ಸಂಸ್ಥೆಯು ಆಶಿಸುತ್ತದೆ.
ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ ಇಂದು(ಫೆ.5) ಬೆಳಗ್ಗೆ ಹೃದಯಾಘಾತ ದಿಂದ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಇಬ್ರಾಹಿಂ ಸುತಾರ ಅವರು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೂರ್ತಿಯಾಗಿದ್ದರು. ಪ್ರವಚನಕ್ಕೆ ಹೆಸರಾಗಿದ್ದರು. ವಿಶ್ವಗುರು ಬಸವಣ್ಣನವರ ಅನುಯಾಯಿಯಾಗಿ, ಬಸವಣ್ಣನವರ ವಚನಗಳನ್ನು ಹೇಳುತ್ತಿದ್ದರು. ವೈದಿಕ, ವಚನ ಹಾಗೂ ಸೂಫಿ ಪರಂಪರೆ ಆಶಯಗಳನ್ನು ಭಜನೆ, ಪ್ರವಚನಗಳ ಮೂಲಕ ತಿಳಿಸುವ ಮೂಲಕ ಹಿಂದೂ-ಮುಸ್ಲಿಂರ ನಡುವೆ ಭಾವೈಕ್ಯತೆಯನ್ನು ಮೂಡಿಸಿದ್ದರು. ಮಹಾಲಿಂಗಪುರದ ಇಬ್ರಾಹಿಂ ಸುತಾರ ಅವರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.