dtvkannada

ಸಿದ್ದಾಪುರ, ಫೆ.28: ಹುತಾತ್ಮ ಯೋಧ ಕೊಡಗಿನ ಮುಹಮ್ಮದ್ ಅಲ್ತಾಫ್ ಅವರ ಕುಟುಂಬವನ್ನು ಭೇಟಿ ಮಾಡಿದ ಎಸ್‌. ಡಿ.ಪಿ.ಐ ರಾಜ್ಯ ನಾಯಕರು ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿದರು.

ವಿರಾಜಪೇಟೆ ತಾಲ್ಲೂಕಿನ ಚೆನ್ನಯ್ಯನಕೋಟೆಯಲ್ಲಿರುವ ಯೋಧನ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, 19 ವರ್ಷಗಳ ಕಾಲ ದೇಶ ಸೇವೆ ಮಾಡಿ, ದೇಶಕ್ಕೋಸ್ಕರ ಹುತಾತ್ಮರಾಗಿರುವ ಮೊಹಮ್ಮದ್ ಅಲ್ತಾಫ್ ಅವರಿಗೆ ಗೌರವ ಸಲ್ಲಿಸಲಿಕೆ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಸಂಸದರು ಬರದೇ ಇರುವುದು ಖಂಡನೀಯ. ರಾಜ್ಯದಲ್ಲಿ ಎಲ್ಲಿಯಾದರು ವೈಯಕ್ತಿಕ ವಿಚಾರಕ್ಕೆ ಕೊಲೆಗಳಾದರೆ ಅಥವಾ ಕೋಮು ಗಲಭೆಯಲ್ಲಿ ಸಾವು ಸಂಭವಿಸಿದರೆ ತಕ್ಷಣ ಸಚಿವರು ಹಾಗೂ ಸಂಸದರು ಭೇಟಿ ನೀಡುವುದರ ಜೊತೆಗೆ ವೈಯಕ್ತಿಕವಾಗಿ ಪರಿಹಾರಗಳನ್ನು ನೀಡುತ್ತಾರೆ. ಆದರೆ ತನ್ನ ಜೀವವನ್ನೇ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧನ ಕುಟುಂಬವನ್ನು ಇನ್ನೂ ಭೇಟಿ ಮಾಡದೆ ಇರುವುದು ಅತ್ಯಂತ ಖಂಡನೀಯ ಎಂದ ಅವರು, ಸ್ವಂತ ಮನೆ ಕೂಡಾ ಇಲ್ಲದ ಬಡತನದಲ್ಲಿರುವ ಹುತಾತ್ಮ ಯೋಧನ ಕುಟುಂಬಕ್ಕೆ ಜಮೀನು ಹಾಗೂ ಮನೆ ಮತ್ತು ಮಕ್ಕಳ ವಿಧ್ಯಾಭ್ಯಾಸದ ಜೊತೆಗೆ ಅವರ ಕುಟುಂಬ ನಿರ್ವಹಣೆಗೆ ಬೇಕಾದ ವ್ಯವಸ್ಥೆಗಳನ್ನು ಸರಕಾರ ಕೂಡಲೇ ಮಾಡಬೇಕೆಂದು ಒತ್ತಾಯಿಸಿದರು.

ಹುತಾತ್ಮ ಯೋಧನ ಸಹೋದರಿ ಮಾತನಾಡಿ, ನಮ್ಮ ಇಡೀ ಕುಟುಂಬವನ್ನೇ ಅಣ್ಣ ನಿರ್ವಹಿಸುತ್ತಿದ್ದರು. ಅವರ ಅಗಲಿಕೆ ಇಡೀ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಈ ಸಂದರ್ಭ ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ಜಿಲ್ಲಾಧ್ಯಕ್ಷ ಮುಸ್ತಫ ಮಡಿಕೇರಿ, ಪ್ರಧಾನ ಕಾರ್ಯದರ್ಶಿ ಶಫಿ, ಕಾರ್ಯದರ್ಶಿ ಬಶೀರ್ ಅಹಮದ್, ಪ್ರಮುಖರಾದ ಮನ್ಸೂರ್, ಸಂಶೀರ್, ಶೌಕತ್ ಅಲಿ, ಅಬ್ದುಲ್ಲಾ ಅಡ್ಕಾರ್ ಸೇರಿದಂತೆ ಮತ್ತಿತರರು ಉಪಸ್ಥಿತರದ್ದರು.

By dtv

Leave a Reply

Your email address will not be published. Required fields are marked *

error: Content is protected !!