dtvkannada

ಶಿವಮೊಗ್ಗದಲ್ಲಿ ನಡೆದ ಬಜರಂಗ ದಳದ ಕಾರ್ಯಕರ್ತನ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಯುಎಪಿಎ ದಾಖಲಿಸಿರುವುದು ಬಿಜೆಪಿ ಸರಕಾರ ನಡೆಸುತ್ತಿರುವ ಕಾನೂನಿನ ದುರ್ಬಳಕೆಗೆ ಸಾಕ್ಷಿಯಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ಹೇಳಿದ್ದಾರೆ.

ಬಜರಂಗ ದಳದ ಕಾರ್ಯಕರ್ತನ ಕೊಲೆಯು ವೈಯಕ್ತಿಕ ದ್ವೇಷದಿಂದ ನಡೆದಿದ್ದರೂ, ಬಿಜೆಪಿ ಅದನ್ನು ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ. ಮಾತ್ರವಲ್ಲ, ಈ ಘಟನೆಯ ಮೂಲಕ ಬಿಜೆಪಿ ನಾಯಕರು ನಗರದಲ್ಲಿ ಹಿಂಸಾಚಾರಕ್ಕೂ ಪ್ರಚೋದನೆ ನೀಡಿದರು. ಕೊಲೆಯಾದ ವ್ಯಕ್ತಿ ಮತ್ತು ಕೊಲೆ ಆರೋಪಿಗಳ ನಡುವೆ ಹಲವು ವರ್ಷಗಳಿಂದ ಘರ್ಷಣೆಗಳು ನಡೆಯುತ್ತಿದ್ದವು ಎಂಬ ವಿಚಾರವನ್ನು ಸ್ವತಃ ಪೊಲೀಸ್ ದಾಖಲೆಗಳೂ ಬಹಿರಂಗಪಡಿಸುತ್ತವೆ. ಆದಾಗ್ಯೂ, ಬಿಜೆಪಿ ಸರಕಾರವು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಬಹುದಾದ ಯುಎಪಿಎ ಕಾನೂನನ್ನು ಕೊಲೆ ಪ್ರಕರಣದ ಆರೋಪಿಗಳ ಮೇಲೆ ಹೇರಿದೆ.

ನರಗುಂದದ ಸಮೀರ್ ಶಹಾಪುರ, ಬೆಳಗಾವಿಯ ಅರ್ಬಾಝ್ ಖಾನ್, ಹೊನ್ನಾಳಿಯ ದಯಾನಥ್ ಖಾನ್ ಹತ್ಯೆ ಸಹಿತ ರಾಜ್ಯದ ವಿವಿಧ ಕಡೆಗಳಲ್ಲಿ ಹಲವು ಮುಸ್ಲಿಮ್ ಯುವಕರ ಹತ್ಯೆಗಳು ನಡೆದಿದೆ. ಇವೆಲ್ಲವೂ ಕೋಮು ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವಂತಹ ಘಟನೆಗಳಾಗಿದ್ದು, ಇದರಲ್ಲಿ ಆರೆಸ್ಸೆಸ್ – ಸಂಘಪರಿವಾರದ ಕಾರ್ಯಕರ್ತರು ಭಾಗಿಯಾಗಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಆದರೆ ಅಲ್ಲೆಲ್ಲೂ ಇಂತಹ ಕರಾಳ ಕಾನೂನು ಬಳಕೆ ಮಾಡದಿರುವುದು ಬಿಜೆಪಿ ಸರಕಾರದ ವಿತಂಡವಾದವನ್ನು ಬಹಿರಂಗಪಡಿಸುತ್ತದೆ.

ಬಿಜೆಪಿ ಸರಕಾರಗಳು ತನ್ನ ರಾಜಕೀಯ ವಿರೋಧಿಗಳನ್ನು ದಮನಿಸುವ ಅಸ್ತ್ರವಾಗಿ ಯುಎಪಿಎಯನ್ನು ಬಳಸಿಕೊಳ್ಳುತ್ತಿವೆ. ನಾಡಿನ ಬುದ್ಧಿಜೀವಿಗಳು, ಮಾನವ ಹಕ್ಕುಗಳ ಹೋರಾಟಗಾರರು, ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ಎನ್.ಐ.ಎ ಮತ್ತು ಕರಾಳ ಕಾನೂನುಗಳನ್ನು ವ್ಯಾಪಕವಾಗಿ ದುರ್ಬಳಕೆ ಮಾಡಲಾಗುತ್ತಿದೆ. ವಿಶೇಷವಾಗಿ ಮುಸ್ಲಿಮ್ ಸಮುದಾಯದ ನಾಯಕರನ್ನು ಮತ್ತು ಸಂಘಟನೆಗಳನ್ನು ಗುರಿಪಡಿಸಲು ಇದನ್ನು ಬಳಸಲಾಗುತ್ತಿದೆ.

ಇದೀಗ ಕೊಲೆ ಪ್ರಕರಣಗಳಿಗೂ ಯುಎಪಿಎ ಹೇರುವ ಮೂಲಕ ಅದು ಉನ್ನತ ತನಿಖಾ ಸಂಸ್ಥೆಗಳ ಗೌರವವನ್ನು ಕುಗ್ಗಿಸುತ್ತಿದೆ. ಬಿಜೆಪಿ ಸರಕಾರದ ರಾಜಕೀಯಪ್ರೇರಿತವಾದ ಇಂತಹ ನಡೆಗಳ ವಿರುದ್ಧ ನಾಗರಿಕ ಸಮುದಾಯವು ಬಲವಾಗಿ ಧ್ವನಿ ಎತ್ತಬೇಕು ಮತ್ತು ತನಿಖಾ ಏಜೆನ್ಸಿಗಳ ದುರ್ಬಳಕೆಯ ವಿರುದ್ಧ ಬೃಹತ್ ಆಂದೋಲನಗಳು ರೂಪುಗೊಳ್ಳಬೇಕಾಗಿದೆ ಎಂದು ನಾಸಿರ್ ಪಾಶ ಹೇಳಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!