ಪುತ್ತೂರು: ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಮೂರು ವರ್ಷದ ಮಗು ಗಂಭೀರ ಗಾಯಗೊಂಡ ಘಟನೆ ಪುತ್ತೂರು ಸಮೀಪದ ಬಪ್ಪಳಿಗೆ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ.
ಬಪ್ಪಳಿಗೆಯ ದಾವೂದ್ ಮಾಲಕತ್ವದ ಅಪಾರ್ಟ್’ಮೆಂಟಿನಲ್ಲಿ ಬಾಡಿಗೆಗಿರುವ ಅದ್ದು ಎಂಬವರ ಮನೆಗೆ ಅವರ ಸಹೋದರ ರಫೀಕ್ ಕುಟುಂಬ ಸಮೇತರಾಗಿ ಬಂದಿದ್ದರು. ಈ ವೇಳೆ ರಫೀಕ್ ಎಂಬವರ ಮೂರು ವರ್ಷದ ಹೆಣ್ಣು ಮಗು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಕಾಲು ಮುರಿತಕ್ಕೊಳಗಾಗಿ ತೀವ್ರ ಗಾಯಗೊಂಡಿದೆ.
ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ್ ಹೆಗ್ಡೆ ಆಸ್ಪತ್ರೆೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ
ಮಕ್ಕಳ ಮೇಲೆ ಕಣ್ಣಿಡಿ
ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಅಪಾಯ ಯಾವುದು ಎಂಬುವುದು ಮುಗ್ದ ಮಕ್ಕಳಿಗೆ ಗೊತ್ತಿರುವುದಿಲ್ಲ, ನಾವು ಮಾಡಿದ್ದೇ ಸಾಹಸ, ಆಡಿದ್ದೇ ಆಟ ಎಂಬ ಮನಸ್ಸು ಮಕ್ಕಳದ್ದು. ಮಕ್ಕಳಾಟಿಕೆ ಕೆಲವೊಮ್ಮೆ ಜೀವಕ್ಕೆ ಅಪಾಯವನ್ನು ತಂದೊಡ್ಡಿದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ.
ಮಕ್ಕಳು ಮನೆಯಿಂದ ಹೊರಗಡೆ ಆಟವಾಡಲು ತೆರಳಿದಲ್ಲಿ ಅವರನ್ನು ವಿಚಾರಿಸುತ್ತಲೇ ಇರಬೇಕಾಗುತ್ತದೆ. ನನ್ನ ಮಗ ಅಥವಾ ಮಗಳು ಅಂಥವರಲ್ಲ ಎಂದು ಪೂರ್ಣವಾಗಿ ನಂಬಬೇಡಿ. ಮಕ್ಕಳು ಇತರ ಮಕ್ಕಳೊಂದಿಗೆ ಸೇರಿದರೆ ಎಲ್ಲಾ ಮಕ್ಕಳೂ ಒಂದೇ ಆಗಿಬಿಡುತ್ತದೆ. ನಾವು ಮಾಡುತ್ತಿರುವುದು ತಪ್ಪು, ಅಪಾಯಕಾರಿ ಕಾರ್ಯ ಎಂಬುದು ಮಕ್ಕಳಿಗೆ ಪರಿಜ್ಞಾನವೇ ಇರುವುದಿಲ್ಲ.
ಘಟನೆ ನಡೆದ ಮೇಲೆಯೇ ಮಕ್ಕಳ ತಪ್ಪಿನ ಅರಿವಾಗುತ್ತದೆ. ಈ ವಿಚಾರದಲ್ಲಿ ಪೋಷಕರು ಮಕ್ಕಳಿಗೆ ಏನೇ ನೀತಿ ಪಾಠ ಹೇಳಿದರೂ ಅದನ್ನು ಕೇಳಿ ಹಾಗೇ ನಡೆಯುವ ಪ್ರಾಯ ಮಕ್ಕಳದ್ದಲ್ಲ. ಮಕ್ಕಳಿಗೆ ತುಂಟಾಟ ಪ್ರಾಯದಲ್ಲಿ ನಿಮ್ಮ ಯಾವ ಸಲಹೆ ಸೂಚನೆಯೂ ನಗಣ್ಯ ಎಂಬುದನ್ನು ಅರಿತುಕೊಳ್ಳಬೇಕು.
ಮಕ್ಕಳು ಎಷ್ಟೇ ಬುದ್ದಿವಂತರಾದರೂ ಅವರ ಮೇಲೆ ನಿಮ್ಮ ಕಣ್ಣು ಸದಾ ಇದ್ದರೆ ಒಳಿತು. ಇಲ್ಲವಾದರೆ ನಮ್ಮ ಸುತ್ತಮುತ್ತ ನಡೆಯುವ ಅನೇಕ ಅಪಾಯಕಾರಿ ಘಟನೆಗಳು ನಮಗೆ ಪಾಠವಾನ್ನಾದರೂ ಕಲಿಸಲಿ. ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ. ನಿಮ್ಮ ಮಕ್ಕಳ ಬಗ್ಗೆ ಕಾಳಜಿ ಜೊತೆಗೆ ಎಚ್ಚರವೂ ಇರಲಿ. ಈದು ಡಿಟಿವಿಯ ಕಳಕಳಿಯ ಮನವಿ