ಬೆಳ್ತಂಗಡಿ: “ದಿಕ್ಕುತೋಚದಂತಹ ಸನ್ನಿವೇಶ, ಬದುಕಲು ಬೇಕಿದ್ದುದು ಧೈರ್ಯ, ಸಾಹಸವಷ್ಟೆ ಹೊರತಾಗಿ ಬೇರೇನಿಲ್ಲ. ಬಂಕರ್ ನಲ್ಲಿ 7 ದಿನ ಕಳೆದು ಕ್ಷಿಪಣಿ ದಾಳಿಗಳನ್ನು ಕಣ್ಣೆದುರೇ ಕಂಡು ಒಂದೇ ಸಮನೆ ತಾಯ್ನಾಡಿನತ್ತ ಮರಳುವ ತವಕದಲ್ಲಿ ಜೀವ ಉಳಿಯಲು ಕಾರಣವಾಗಿದ್ದು ಭಾರತೀಯ ತ್ರಿವರ್ಣ ಧ್ವಜ…” ಇದು ಯುದ್ಧಪೀಡಿತ ಉಕ್ರೇನ್ ಭೂಮಿಯಿಂದ ಉಜಿರೆಗೆ ತಲುಪಿದ ವೈದ್ಯಕೀಯ ವಿದ್ಯಾರ್ಥಿ ಹೀನಾ ಫಾತಿಮಾ ಅವರ ಅನುಭವ ಮಾತುಗಳು.
ಯುದ್ಧಗ್ರಸ್ತ ಉಕ್ರೇನ್ ನಿಂದ ಬೆಳ್ತಂಗಡಿ ತಾಲೂಕಿನ ಟಿ.ಬಿ.ಕ್ರಾಸ್ ನಿವಾಸಿ ದಿ.ಯಾಸೀನ್ ಮತ್ತು ಶಹನಾ ದಂಪತಿ ಪುತ್ರಿ ಹೀನಾ ಫಾತಿಮಾ ಅವರು ಮಾ.6 ರಂದು ಮಧ್ಯಾಹ್ನ 11 ಗಂಟೆಗೆ ಉಜಿರೆ ತಮ್ಮ ನಿವಾಸಕ್ಕೆ ತಲುಪಿದ ಬಳಿಕ ಉಕ್ರೇನ್ ನ ಆತಂಕದ ದಿನಗಳ ವಿಚಾರವನ್ನು ಹಂಚಿಕೊಂಡರು.
ಖಾರ್ಕೀವ್ ನ್ಯಾಷನಲ್ ಮೆಡಿಕಲ್ ಕಾಲೇಜ್ ನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಹೀನಾ ಪೋಲೆಂಡ್ ನಿಂದ ನಿನ್ನೆ ದೆಹಲಿಗೆ ತಲುಪಿದ್ದರು. ಅಲ್ಲಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದು ಮಾ.6 ರಂದು ಬೆಳಗ್ಗೆ 8 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದು ಬಳಿಕ ಉಜಿರೆಯ ತಮ್ಮ ನಿವಾಸವನ್ನು ಸೇರಿ ತನ್ನ ತಾಯಿ, ಅಜ್ಜ, ಅಜ್ಜಿ, ಮಾವನನ್ನು ಕಂಡು ಭಾವುಕರಾದರು.
2020 ಡಿಸೆಂಬರ್ ನಲ್ಲಿ ಖಾರ್ಕೀವ್ ನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸೇರ್ಪಡೆಗೊಂಡಿದ್ದ ನಾನು ಕೋವಿಡ್ ಸಮಯದಲ್ಲಿ ಊರಿಗೆ ಮರಳಿದ್ದೆ. ಆದರೆ ಯುದ್ಧನಡೆಯುವ ಕೆಲದಿನಗಳ ಹಿಂದೆ ಮುನ್ಸೂಚನೆ ಬಂದಿತ್ತಾದರು ಯುದ್ಧ ನಡೆದೇ ನಡೆಯಬಹುದು ಎಂಬ ವಿಶ್ವಾಸವಿರಲಿಲ್ಲ. ಸರ್ಫ್ನೀಯಾ ಸಮೀಪ ಕಾಲೇಜಿದ್ದು ಅಲ್ಲಿಂದ 2 ಮೆಟ್ರೋ ಸ್ಟೇಷನ್ ದೂರದ ನೌಕೋವಾದಲ್ಲಿ ಉಳಿದುಕೊಂಡಿದ್ದೆವು. ಯುದ್ಧ ಆರಂಭವಾಗಿದ್ದ ದಿನ ನಾನು 5ನೇ ಮಹಡಿಯಲ್ಲಿ ಊಟ ಮಾಡುತ್ತಿರುವ ಸಮಯ ಪಕ್ಕದ ಕಟ್ಟಡಕ್ಕೆ ಕ್ಷಿಪಣಿ ದಾಳಿ ನಡೆದಿತ್ತು. ಅಂದು ಬಂಕರ್ ನಲ್ಲಿ ವಿದ್ಯುತ್, ನೆಟ್ ವರ್ಕ್ ಇಲ್ಲದೆ ನಮ್ಮ ಕರ್ನಾಟಕದ ನಾನು ಸೇರಿದಂತೆ 8 ಮಂದಿ 7 ದಿನ ಕಳೆದಿದ್ದೆವು.
ಅದೇ ಸಮಯದಲ್ಲಿ ತರಕಾರಿ ತರಲು ಹೋಗಿದ್ದ ನನ್ನ ಸೀನಿಯರ್ ರಾಣೆಬೆನ್ನೂರು ನಿವಾಸಿ ನವೀನ್ ಸಾವನ್ನಪ್ಪಿರುವ ಮಾಹಿತಿ ತಿಳಿಯಿತು. ಅಲ್ಲಿಂದ ಬಳಿಕ ನಾವು ಜೀವ ಉಳಿಸಿಕೊಳ್ಳಲು ವಿಷಮ ಪರಿಸ್ಥಿತಿಯಲ್ಲಿ ಮಾ.1 ರಂದು 1000 ಕಿ.ಮೀ. ದೂರದ ಲಿವಿವ್ ಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದೆವು. ಈ ವೇಳೆ ಮಾರ್ಗ ಮಧ್ಯ ಕ್ಷಿಪಣಿ ದಾಳಿಯಾದ ಸಂದರ್ಭ ರೈಲಿನಲ್ಲಿ ಭೂಕಂಪನದ ಅನುಭವವಾಗಿತ್ತು. ನಾವು ಹಿಂದಿರುಗಿ ಬರುವ ಆಸೆಯನ್ನೇ ಬಿಟ್ಟಿದ್ದೆವು ಎಂದರು.
ರೈಲಿನಲ್ಲಿಮಹಿಳೆಯರಿಗಷ್ಟೆ ಮೊದಲ ಆದ್ಯತೆಯಾಗಿತ್ತು. ಅದರಲ್ಲೂ ಉಕ್ರೇನ್ ಪ್ರಜೆಗಳಿಗೆ ಮೊದಲ ಅವಕಾಶವಿತ್ತು. ನಾವು ಪೋಲೆಂಡ್ ತಲುಪಲು ಲಿವಿವ್ ನಿಂದ ವಾಹನದ ಆಶ್ರಯ ಪಡೆಯಬೇಕಿತ್ತು. ಅಲ್ಲಿ ಉಕ್ರೇನ್ ಸೈನಿಕರು ನೆರವಾಗಿದ್ದರು, ಕಾರಣ ನಾವು ನಮ್ಮ ಬ್ಯಾಗ್ ನಲ್ಲಿದ್ದ ಸ್ಕೆಚ್ ಪೆನ್ ಬಳಸಿ ಬಿಳಿಹಾಳೆಯಲ್ಲಿ ತ್ರಿವರ್ಣ ಧ್ವಜ ರಚಿಸಿ ಪ್ರದರ್ಶಿಸಿದೆವು. ಅಲ್ಲಿಂದ ಮುಂದೆ ಪೋಲೆಂಡ್ ಗಡಿ ತಲುಪಿ ಭಾರತೀಯ ರಾಯಭಾರ ಕಚೇರಿಯ ಸಹಾಯ ಪಡೆಯುವವರೆಗೂ ಈ ತ್ರಿವರ್ಣ ಧ್ವಜ ನಮ್ಮನ್ನು ರಕ್ಷಿಸಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎನ್ನುತ್ತಾರೆ ಹೀನಾ.
“ಭಾರತೀಯ ಎಂಬಸಿ ಅಲ್ಲಿಂದ ಮನೆವರೆಗೆ ತಲುಪವವರೆಗೆ ನಮ್ಮನ್ನು ಮನೆ ಮಕ್ಕಳಂತೆ ಆರೈಕೆ ಮಾಡಿದೆ. ಊಟ, ಉಪಚಾರ ವಸತಿ ಪ್ರತಿಯೊಂದು ವ್ಯವಸ್ಥೆ ಕಲ್ಪಿಸಿದೆ. ನಮ್ಮನ್ನು ತಾಯ್ನಾಡಿಗೆ ಕರೆತರುವಲ್ಲಿ ನೆರವಾದ ಎಲ್ಲರಿಗೂ ನಾನು ಅಭಾರಿ” ಎಂದ ಹೀನಾ ಕಣ್ಣಂಚಿನಲ್ಲಿ ಆನಂದ ಬಾಷ್ಪವಿತ್ತು.
‘’ನನ್ನ ಜತೆಗಿದ್ದ ಸ್ನೇಹಿತರು, ಸಹಪಾಟಿಗಳು ಇನ್ನೂ ಮರಳಲಿಲ್ಲ, ಫೋನ್ ಕರೆ ಮಾಡಿ ಅವರಿಗೂ ಧೈರ್ಯ ತುಂಬಿದ್ದೇನೆ. ಸರಕಾರ ಮುಂದಿನ ದಿನಗಳಲ್ಲಿ ನಮ್ಮ ಶಿಕ್ಷಣಕ್ಕೆ ಪೂರಕ ನೆರವಾಗಲಿ ಎಂಬುದು ನಮ್ಮ ಆಶಯ’ ಎಂದು ಮನವಿ ಮಾಡಿದರು.
ಹೀನಾ ಫಾತಿಮಾ ಮನೆಗೆ ಮರಳಿದ ಸಂತಸವನ್ನು ಹಂಚಿಕೊಂಡ ತಾಯಿ ಶಹನಾ, ಅಜ್ಜ ಉಸ್ಮಾನ್, ಅಜ್ಜಿ ನಫಿಸಾ, ಮಾವ ಅಬಿದ್ ಅಲಿ, ಮಗಳನ್ನು ಮತ್ತೆ ಮರಳಿಸಿಕೊಟ್ಟ ಭಾರತೀಯ ಸರಕಾರಕ್ಕೆ, ಜಿಲ್ಲಾಧಿಕಾರಿ, ಸ್ಥಳೀಯಾಡಳಿತ ಸೇರಿದಂತೆ ತಮಗೆ ಧೈರ್ಯ ತುಂಬಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.