ಕಾರ್ಕಳ: ಆಸ್ತಿಗಾಗಿ ಒಡಹುಟ್ಟಿದ ಅಣ್ಣನನ್ನು ತಮ್ಮ ಚೂರಿಯಿಂದ ಇರಿದು ಕೊಲೆಗೈದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಬಜಕಳ ಎಂಬಲ್ಲಿ ನಿನ್ನೆ ನಡೆದಿದೆ.
25 ಸೆಂಟ್ಸ್ ಜಾಗದ ಆಸ್ತಿಗಾಗಿ ಅಣ್ಣ
ಶೇಖರ್ (50) ಎಂಬವರನ್ನು ತಮ್ಮ ರಾಜು(35) ಎಂಬಾತ ಕೊಲೆ ಮಾಡಿದ್ದಾನೆ.
ಘಟನೆ ವಿವರ:
ಶೇಖರ್ ಮತ್ತು ರಾಜು ಸಹೋದರರಾಗಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕೂಲಿ ಕಾರ್ಮಿಕರು ಆಗಿರುವ ಇವರಿಬ್ಬರ ನಡುವೆ ಅನೇಕ ವರ್ಷಗಳಿಂದ ವೈಮನಸ್ಸು ಇತ್ತು. ಅವರ ತಾಯಿಗೆ ಮಂಜೂರಾಗಿರುವ ಸುಮಾರು 25 ಸೆಂಟ್ಸ್ ಭೂಮಿಯಲ್ಲಿ ಶೇಖರ ವಾಸವಾಗಿದ್ದು, ರಾಜು ಅಲ್ಲೇ ಸುಮಾರು ಅರ್ಧ ಕಿಲೋ ಮೀಟರ್ ಅಂತರದಲ್ಲಿ ಪ್ರತ್ಯೇಕ ಶೆಡ್ ನಿರ್ಮಿಸಿ ವಾಸವಾಗಿದ್ದ.
ಭಾನುವಾರದಂದು ಶೇಖರ ಮನೆಯಲ್ಲಿ ಅಂಗಳದ ದುರಸ್ತಿ ಕಾರ್ಯ ನಡೆಸುತ್ತಿದ್ದರು. ಅದಕ್ಕಾಗಿ ಮೂವರು ಕೆಲಸದಾಳುಗಳ ಜತೆ ರಸ್ತೆ ಬದಿಯಿಂದ ಜಲ್ಲಿಯನ್ನು ಮನೆಗೆ ಸಾಗಿಸುತ್ತಿದ್ದರು. ಮಧ್ಯಾಹ್ನದ ವೇಳೆ ಪಾನಮತ್ತನಾಗಿ ಅಲ್ಲಿ ಆಗಮಿಸಿದ ರಾಜು, ತಾಯಿಗೆ ಸಂಬಂಧಿಸಿದ ಜಾಗ ಇದು ನನಗೂ ಹಕ್ಕಿದೆ. ಆದ್ದರಿಂದ ನೀನೊಬ್ಬನೇ ಮನೆಯ ದುರಸ್ತಿ ಕೆಲಸ ನಿರ್ವಹಿಸಬಾರದು ಎಂದು ಆಕ್ಷೇಪಿಸಿದ್ದ.
ತಮ್ಮನ ಮಾತುಗಳಿಗೆ ಅಣ್ಣ ಶೇಖರ ಕ್ಯಾರೇ ಎನ್ನಲಿಲ್ಲ. ತಾನು ಕೈಗೊಂಡ ಕೆಲಸವನ್ನು ಮುಂದುವರೆಸಿದ. ಕುಪಿತನಾದ ರಾಜು ನಿನಗೆ ಕಲಿಸುತ್ತೇನೆ ಎಂದು ಬೆದರಿಕೆಯೊಡ್ಡಿ ಅರ್ಧ ಗಂಟೆಯ ಬಳಿಕ ರಾಜು ಚೂರಿಯನ್ನು ತಂದಿದ್ದ. ಜಲ್ಲಿ ಕೊಂಡೊಯ್ಯುವ ಕೆಲಸದಲ್ಲಿ ಮಗ್ನನಾಗಿದ್ದ ಅಣ್ಣನ ಕುತ್ತಿಗೆ ಮತ್ತು ಹೊಟ್ಟೆಯ ಭಾಗಕ್ಕೆ ತಿವಿದಿದ್ದ. ನಂತರ ಇರಿದ ಚೂರಿಯನ್ನು ತೊಳೆಯಲು ನೀರು ಕೊಡಿ ಎಂದು ಬೊಬ್ಬಿಟ್ಟಿದ್ದ. ಘಟನೆಯನ್ನು ಕಂಡು ಜನ ಆಗಮಿಸುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತಿದ್ದ.
ಚೂರಿ ಇರಿತದ ರಕ್ತಸ್ರಾವದಿಂದ ಶೇಖರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೊಲೆಗೈದು ಕೆಲವೇ ಘಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ