ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯಲ್ಲಿ ಇಬ್ಬರು ಬಾಲಕಿಯರಿಗೆ ಯುವಕರ ಗುಂಪೊಂದು ಸಾಮೂಹಿಕವಾಗಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸರು ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ.
ಮಧ್ಯಪ್ರದೇಶದ ಅಲಿರಾಜ್‌ಪುರದಲ್ಲಿ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಕೇಸರಿ ಶಾಲು ಧರಿಸಿದ ಕೆಲವು ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಭಗೋರಿಯಾ ಹಬ್ಬದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅದೇ ಸಮಯದಲ್ಲಿ, ಕಾಂಗ್ರೆಸ್ ನಾಯಕ ಕೆಕೆ ಮಿಶ್ರಾ ಅವರು ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಕ್ರಮ ತೆಗೆದುಕೊಳ್ಳದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಈ ಘಟನೆ ನಡೆದಿದೆ. ಅಲಿರಾಜಪುರ ಜಿಲ್ಲೆಯ ವಾಲ್ಪುರ್ ಗ್ರಾಮದಲ್ಲಿ ಮಾರ್ಚ್ 11 ರಂದು ಭಗೋರಿಯಾ ಜಾತ್ರೆ ನಡೆಯಿತು ಎಂದು ತಿಳಿದುಬಂದಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ಇಬ್ಬರು ಹೆಣ್ಣುಮಕ್ಕಳಿಗೆ ಯುವಕರ ಗುಂಪು ಕಿರುಕುಳ ನೀಡುತ್ತಿರುವುದನ್ನು ಕಾಣಬಹುದು. ವಾಹನ ಮರೆಯಲ್ಲಿರುವ ಯುವತಿಗೆ ಕಿರುಕುಳ ನೀಡುತ್ತಿರುವುದನ್ನು ಒಂದೆಡೆಯಾದರೆ, ಮತ್ತೊಬ್ಬ ಬಾಲಕಿಯನ್ನು ನಡುಬೀದಿಯಲ್ಲಿ ಎಳೆದಾಡಿ ಕಿರುಕುಳ ನೀಡುವುದನ್ನು ಕಾಣಬಹುದು.
ಘಟನೆಯ ಬಗ್ಗೆ ದೂರುಗಳು ಬಂದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಎಚ್ಚೆತ್ತುಕೊಂಡು ಕ್ರಮ ಜರುಗಿಸಿದ್ದಾರೆ ಎಂದು ಅಲಿರಾಜ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮನೋಜ್ ಸಿಂಗ್ ಹೇಳಿದ್ದಾರೆ. ನಾವು ಕೆಲವು ಯುವಕರನ್ನು ಗುರುತಿಸಿದ್ದೇವೆ, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು” ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಮಧ್ಯಪ್ರದೇಶದಲ್ಲಿ ಬುಡಕಟ್ಟು ಸಮುದಾಯಗಳು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಭಗೋರಿಯಾವನ್ನು ಆಯೋಜಿಸಲಾಗುತ್ತದೆ. ಇದು ಆದಿವಾಸಿಗಳ ದೊಡ್ಡ ಹಬ್ಬವೆಂದು ಪರಿಗಣಿಸಲ್ಪಟ್ಟಿದೆ. ಪ್ರತಿ ವರ್ಷ ಗಂಗಾ ಮಹಾದೇವನ ದೇವಸ್ಥಾನದಲ್ಲಿ ಜಾತ್ರೆಯನ್ನು ಆಯೋಜಿಸುವುದರೊಂದಿಗೆ ಹಬ್ಬ ಪ್ರಾರಂಭವಾಗುತ್ತದೆ. ಅಲಿರಾಜಪುರದ ವಾಲ್ಪುರ್‌ನ ಭಗೋರಿಯಾ ಹಬ್ಬ ಬಹಳ ಜನಪ್ರಿಯವಾಗಿದೆ.
ಟ್ರೈಬಲ್ ಆರ್ಮಿ ಟ್ವಿಟರ್ ಖಾತೆಯಲ್ಲಿ ಘಟನೆಯ ಕುರಿತು ಟ್ವೀಟ್ ಮಾಡಲಾಗಿದ್ದು, “ಇದು ಭೀಕರ ದೃಶ್ಯ. ಬುಡಕಟ್ಟು ಮಹಿಳೆಯರ ಮೇಲಾಗಿರುವ ಇಂತಹ ಘಟನೆಗಳು ನಿತ್ಯವೂ ಘಟಿಸುತ್ತವೆ. ಯಾಕೆಂದರೆ ಬುಡಕಟ್ಟು ಮಹಿಳೆಯರು ಅಲಕ್ಷಿತ ಸಮುದಾಯಕ್ಕೆ ಸೇರಿರುವುದರಿಂದ ಇಂತಹ ಘಟನೆಗಳಾಗುತ್ತವೆ” ಎಂದು ಅಭಿಪ್ರಾಯಪಡಲಾಗಿದೆ.