ಮಂಗಳೂರು: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಸಂಸ್ಥೆಯ 200ನೇ ಬೃಹತ್ ರಕ್ತದಾನ ಶಿಬಿರವು ರಿಪ್ ಶಿಪ್ ವರ್ಲ್ಡ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಜಂಟಿ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಕುಡ್ಲ ಹಾಗೂ ಇಂಡಿಯನ್ ರೆಡ್
ಕ್ರಾಸ್ ಸೊಸೈಟಿ ರಕ್ತನಿಧಿ ಮಂಗಳೂರು ಇದರ ಸಹಯೋಗದೊಂದಿಗೆ ಇದೇ ಬರುವ 26/03/2022ನೇ ಶನಿವಾರ ದಂದು ಮಂಗಳೂರಿನ ಬಲ್ಮಠದಲ್ಲಿರುವ ಕರ್ನಾಟಕ ಥಿಯೋಲೋಜಿಕಲ್ ಕಾಲೇಜಿನ ಬಿಷಪ್ ಜತ್ತನ್ನ ಆಡಿಟೋರಿಯಂನಲ್ಲಿ ನಡೆಯಲಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ನಿಸಾರ್ ಉಳ್ಳಾಲ, ಸಂಸ್ಥೆಯು ಸಾಗಿಬಂದ ಹಾದಿ ಹಾಗೂ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ವಿವರಿಸಿದರು.
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯು ಆರು ವರ್ಷಗಳಲ್ಲಿ 199 ರಕ್ತದಾನ ಶಿಬಿರಗಳನ್ನು ಆಯೋಜಿಸಿ ಆ ಮೂಲಕ 11402 ಯೂನಿಟ್ ರಕ್ತವನ್ನು ಸಂಗ್ರಹಿಸಿದ್ದು ಹಾಗೂ ತುರ್ತು ಸಂದರ್ಭಗಳಲ್ಲಿ ನೇರವಾಗಿ ರಕ್ತನಿಧಿಗಳಿಗೆ 2289 ರಕ್ತದಾನಿಗಳನ್ನು ಪೂರೈಸುವ ಮೂಲಕ ಒಟ್ಟು 13691 ಯೂನಿಟ್ ರಕ್ತವನ್ನು ರಕ್ತನಿಧಿಗಳಿಗೆ ನೀಡುವಲ್ಲಿ ಯಶಸ್ವಿಯಾಗಿದೆ. ಒಂದೇ ತಿಂಗಳಿನಲ್ಲಿ ಗರಿಷ್ಟ 24 ರಕ್ತದಾನ ಶಿಬಿರಗಳನ್ನು ಹಾಗೂ ಒಂದೇ ದಿನದಲ್ಲಿ ಗರಿಷ್ಟ 21 ರಕ್ತದಾನ ಶಿಬಿರಗಳನ್ನು ಆಯೋಜಿಸಿದ ಕೀರ್ತಿಯನ್ನು ಕೂಡಾ ತನ್ನದಾಗಿಸಿ ಕೊಂಡಿದೆ. ದಿನನಿತ್ಯ ಸರಾಸರಿ 20 ರಿಂದ 30 ಯೂನಿಟ್ ರಕ್ತವನ್ನು ರೋಗಿಗಳಿಗೆ ಪೂರೈಸುತ್ತಿದೆ.ಅಲ್ಲದೇ ಪ್ರತಿನಿತ್ಯ ಆವಶ್ಯವಿರುವ ತಾಜಾ ರಕ್ತಗಳ ತುರ್ತು ಮನವಿಯನ್ನು ಕೂಡಾ ಸ್ವೀಕರಿಸಿ ದಾನಿಗಳನ್ನು ಹುಡುಕಿ ಅಗತ್ಯವಿರುವ ರೋಗಿಗಳಿಗೆ ಕ್ಲಪ್ತ ಸಮಯದಲ್ಲಿ ಪೂರೈಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದೆ. COVID – 19 ತುರ್ತು ಸಮಯದಲ್ಲಿ 700 ಕ್ಕೂ ಅಧಿಕ ರಕ್ತದಾನಿಗಳನ್ನು ನೇರವಾಗಿ ರಕ್ತನಿಧಿಗಳಿಗೆ ಪೂರೈಸಿ ಕೊರೋನಾ ಭೀತಿಯ ನಡುವೆಯೂ ತುರ್ತು ಸಂದರ್ಭದಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ರಕ್ತದಾನಿಗಳನ್ನು ಪೂರೈಕೆ ಮಾಡಿದ ಕೀರ್ತಿಗೆ ಈ ಸಂಸ್ಥೆಗೆ ಸಲ್ಲುತ್ತದೆ ಎಂದು ಹೇಳಿದರು.
ರಿಪ್ಶಿಪ್ ವರ್ಲ್ಡ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಸ್ಥಾಪಕ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ರಿಪ್ಸನ್ ಜೆರೆಮಿಯಾ ಮಾತನಾಡಿ, ತಮ್ಮ ಕಂಪೆನಿಯ ಉದ್ದೇಶವನ್ನು ವಿವರಿಸಿದರು. ಸಮಾಜದಲ್ಲಿರುವ ಪ್ರತೀ ವರ್ಗದ ಜನರಿಗೆ ಅದ್ಭುತವಾದ ಪ್ರವಾಸದ ಅನುಭವವನ್ನು ನೀಡುವ ಕೇಂದ್ರ ಉದ್ದೇಶದ ಜೊತೆಗೆ ಆರ್ಥಿಕ ಶಿಕ್ಷಣ, ಉದ್ಯೋಗವಕಾಶ ಪ್ರಾರಂಬಿಸುವ ಸಲುವಾಗಿ ಕಂಪೆನಿಯನ್ನು ಸ್ಥಾಪಿಸಿದ್ದೇವೆ.
ಸಮಾಜಕ್ಕೆ ಇದರ ಮಾಹಿತಿ ತಿಳಿಸುವ ಉದ್ದೇಶ ಇಟ್ಟುಕೊಂಡು ಸಮಾಜ ಸೇವೆಗೆ ಬೆಂಬಲ ನೀಡುತ್ತಾ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯೊಂದಿಗೆ ಕೈ ಜೋಡಿಸಿ ರಕ್ತದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಿಪ್ಶಿಪ್ ವರ್ಲ್ಡ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ಡೈರೆಕ್ಟರ್ರುಗಳಾದ ಪಲ್ತೊರಾಯ್ ಆರ್, ಶಿವ ಕುಮಾರ್, ಸಂದೀಪ್ ಕುಮಾರ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯ ನಿರ್ವಾಹಕರಾದ ಇಫಾಝ್ ಬನ್ನೂರುರವರು ಉಪಸ್ಥಿತರಿದ್ದರು.
ಸಂಸ್ಥೆಯ 200ನೇ ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕಾಗಿ ಸಂಘಟಕರು ಪತ್ರಿಕಾಗೋಷ್ಠಿಯ ಮೂಲಕ ತಿಳಿಸಿದ್ದಾರೆ.