dtvkannada

5 ಬಾರಿಯ ಚಾಂಪಿಯನ್, ಬಲಿಷ್ಠ ತಂಡ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ಮುಂಬೈ ಇಂಡಿಯನ್ಸ್ ಟೀಮ್ ಐಪಿಎಲ್ 2022 ರಲ್ಲಿ ಹ್ಯಾಟ್ರಿಕ್ ಸೋಲುಂಡು ಆಘಾತಕ್ಕೊಳಗಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಮುಂಬೈ ಸಂಪೂರ್ಣ ವೈಫಲ್ಯ ಅನುಭವಿಸಿತು. ವಿಶ್ವ ಶ್ರೇಷ್ಠ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಈ ಪಂದ್ಯದಲ್ಲಿ ದುಬಾರಿಯಾದರು. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಮುಂಬೈ ತಂಡ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್‌ಗೆ 161 ರನ್ ಗಳಿಸಿತು. ಪ್ರತಿಯಾಗಿ ಕೆಕೆಆರ್ ತಂಡ ವೆಂಕಟೇಶ್ ಅಯ್ಯರ್ ಹಾಗೂ ಕಮ್ಮಿನ್ಸ್ ಅಬ್ಬರದ ಫಲವಾಗಿ 16 ಓವರ್‌ಗಳಲ್ಲೇ ಜಯ ಸಾಧಿಸಿತು. ಪಂದ್ಯ ಸೋತಿದ್ದರಿಂದ ರೋಹಿತ್ ಶರ್ಮಾ ಸಿಟ್ಟಾದರು. ಪಂದ್ಯ ಮುಗಿದ ಬಳಿಕ ಮಾತನಾಡುವ ವೇಳೆ ಇದು ಎಲ್ಲರ ಕಣ್ಣಿಗೆ ಕಂಡುಬಂತು.

ಹೌದು, ಹ್ಯಾಟ್ರಿಕ್ ಸೋಲಿನ ಮುಖಭಂಗಕ್ಕೆ ಒಳಗಾಗಿರುವ ಮುಂಬೈ ಪರ ಸ್ವತಃ ನಾಯಕ ರೋಹಿತ್ ಶರ್ಮಾ ಅವರೇ ಫಾರ್ಮ್​​​ನಲ್ಲಿಲ್ಲ. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸಂಟೇಷನ್ ವೇಳೆ ರೋಹಿತ್ ಸಿಟ್ಟಿಗೆದ್ದ ಘಟನೆಯೂ ನಡೆಯಿತು. “ಕಾಮೆಂಟೇಟರ್ ಅವರ ಪ್ರಶ್ನೆಗಳು ಸರಿಯಾಗಿ ಕೇಳುತ್ತಿಲ್ಲ, ವಾಲ್ಯುಮ್ ಜಾಸ್ತಿ ಮಾಡಿ” ಎಂದು ಕೋಪದಿಂದ ಹೇಳಿದರು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಕೂಡ ಆಗುತ್ತಿದೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, “ಪ್ಯಾಟ್ ಕಮಿನ್ಸ್​ ಬಂದು ಮೊದಲ ಪಂದ್ಯದಲ್ಲೇ ಈರೀತಿ ಆಡಬಹುದು ಎಂಬ ಊಹೆ ಕೂಡ ಇರಲಿಲ್ಲ. ಅವರಿಗೆ ಕ್ರೆಡಿಟ್ ಸಲ್ಲಬೇಕು. ಪಿಚ್ ಉತ್ತಮವಾಗಿತ್ತು. ಪಂದ್ಯ ಆರಂಭವಾದ ಬಳಿಕ ಬ್ಯಾಟರ್​ಗಳಿಗೆ ಸಹಾಯವಾಗುತ್ತಿತ್ತು. ನಾವು ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವಿದೆವು. ಕೊನೆಯ 4-5 ಓವರ್​ಗಳಲ್ಲಿ 70+ ರನ್ ಕಲೆಹಾಕಿದ್ದು ಸಹಾಯವಾಯಿತು. ಬ್ಯಾಟರ್​​ಗಳಿಗೆ ಆ ಕ್ರೆಡಿಟ್ ಸಲ್ಲಬೇಕು. ನಾವು ಯೋಜನೆ ರೂಪಿಸಿದಂತೆ ಬೌಲಿಂಗ್ ಮಾಡಲು ಕೂಡ ಸಾಧ್ಯವಾಗಲಿಲ್ಲ,” ಎಂದು ಹೇಳಿದ್ದಾರೆ.

“15 ಓವರ್ ವರೆಗೂ ನಾವು ಗೇಮ್​ನಲ್ಲೆ ಇದ್ದೆವು. ಆದರೆ, ಕಮಿನ್ಸ್ ಬಂದು ಅವರ ಕಡೆ ಗೆಲುವನ್ನು ತಿರುಗಿಸಿದರು. ರನ್ ಗಳಿಸುತ್ತಾ ಸಾಗಿದರೆ ನೀವು ಮೇಲುಗೈ ಸಾಧಿಸುತ್ತೀರಿ. ನಾವು ಅವರ 5 ವಿಕೆಟ್ ಕಿತ್ತಿದ್ದೆವು. ಆದರೂ ವೆಂಕಟೇಶ್ ಮತ್ತು ಪ್ಯಾಟ್ ಕಮಿನ್ಸ್ ವಿಕೆಟ್ ಮುಖ್ಯವಾಯಿತು. ನಂತರದಲ್ಲಿ ಸುನಿಲ್ ನರೈನ್ ಕೂಡ ಇದ್ದರು. ಕೊನೆಯ ಐದು ಓವರ್​ನಲ್ಲಿ ಎಲ್ಲವೂ ಬದಲಾಯಿತು. ಇದನ್ನು ಅರಗಿಸಿಕೊಳ್ಳುವುದು ಕಷ್ಟ. ಮುಂದಿನ ಪಂದ್ಯಕ್ಕೆ ಇನ್ನಷ್ಟು ಕಷ್ಟ ಪಡುತ್ತೇವೆ,” ಎಂಬುದು ರೋಹಿತ್ ಮಾತು.

ಗೆದ್ದ ತಂಡದ ನಾಯಕ ಶ್ರೇಯಸ್ ಅಯ್ಯರ್ ಮಾತನಾಡಿ, “ಪ್ಯಾಟ್ ಕಮಿನ್ಸ್ ಹೀಗೆ ಬ್ಯಾಟಿಂಗ್ ಮಾಡಿದ್ದು ನಿಜಕ್ಕೂ ಅಚ್ಚು ಉಂಟು ಮಾಡಿತು. ಯಾಕೆಂದರೆ, ಪಂದ್ಯಕ್ಕೂ ಮುನ್ನ ಅವರು ನೆಟ್ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವಾಗ ಕ್ಲೀನ್ ಬೌಲ್ಡ್ ಆಗಿದ್ದರು. ಆದರೆ ಈಗ ಹೀಗೆ ಆಡಿದ್ದಾರೆ. ವೆಂಕಟೇಶ್ ಕೂಡ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. ನಾನು ಬ್ಯಾಟಿಂಗ್ಗೆ ಇಳಿದಾಗ ವೆಂಕಿಗೆ ಹೇಳಿದ್ದೆ ಸರಿಯಾಗಿ ಸಮಯಕ್ಕೆ ತಕ್ಕಂತೆ ಬ್ಯಾಟ್ ಮಾಡು ಎಂದು, ಯಾಕಂದ್ರೆ ಅವರು ಸ್ವಲ್ಪ ಓವರ್ ಹಿಟ್ಟಿಂಗ್ ಬ್ಯಾಟರ್. ನಮಲ್ಲಿ ಅನೇಕರು ದೊಡ್ಡ ಹೊಡೆತವನ್ನು ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ,” ಎಂದು ಹೇಳಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!