dtvkannada

ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಂಘಟನೆಯನ್ನು ಬಲಪಡಿಸಿಕೊಳ್ಳಲು ಯತ್ನಿಸುತ್ತಿರುವ ಸಂದರ್ಭದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕೇಳಿಬಂದಿರುವ ಶೇ 40ರ ಕಮಿಷನ್ ಆರೋಪ ಪಕ್ಷಕ್ಕೆ ಹಿನ್ನಡೆ ತಂದೊಡ್ಡಬಹುದು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಮೈಸೂರಿನಲ್ಲಿ ಬುಧವಾರ ಎರಡನೇ ದಿನದ ಬಿಜೆಪಿ ಸಂಘಟನಾತ್ಮಕ ಯಾತ್ರೆ ನಡೆಯಬೇಕಿತ್ತು. ಸಚಿವ ಸಂಪುಟದಲ್ಲಿ ಹಿರಿಯ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪ ಹಲವು ಪ್ರಮುಖರನ್ನು ಭೇಟಿಯಾಗಿ ಸಂಘಟನೆ ಬಲಗೊಳಿಸುವ ಬಗ್ಗೆ ಚರ್ಚಿಸಬೇಕಿತ್ತು. ಆದರೆ ಯಾವುದೋ ಫೋನ್ ಕರೆ ಬಂದ ನಂತರ ಉದ್ವಿಗ್ನಗೊಂಡ ಅವರು ತರಾತುರಿಯಲ್ಲಿ ಬೆಂಗಳೂರಿಗೆ ಹೊರಟರು. ಸುಮಾರು 15 ನಿಮಿಷಗಳ ಕಾಲ ಫೋನ್ನಲ್ಲಿ ಮಾತನಾಡಿದ ಅವರು ಸಂಘಟನಾತ್ಮಕ ಸಭೆಯಲ್ಲಿ ಭಾಗಿಯಾಗದೆ ಬೆಂಗಳೂರಿಗೆ ಧಾವಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ರಾಜೀನಾಮೆ ಕುರಿತು ಅಂತಿಮ ನಿರ್ಧಾರ ಪ್ರಕಟಿಸಬಹುದು ಎಂದು ಉನ್ನತ ಮೂಲಗಳು ಹೇಳಿವೆ. ಸದ್ಯ ಮಂಗಳೂರಿನಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಾಹ್ನ 2.30ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಮೈಸೂರಿನ ಲಲಿತ್ ಮಹಲ್ನಲ್ಲಿ ಕೆ.ಎಸ್.ಈಶ್ವರಪ್ಪ ವಾಸ್ತವ್ಯ ಹೂಡಿದ್ದರು. ಲಲಿತ್ ಮಹಲ್ನ ಒಳ ಆವರಣದಲ್ಲಿ ಏಕಾಂಗಿಯಾಗಿ ಫೋನ್ನಲ್ಲಿ ಬಿರುಸಿನ ಮಾತುಕತೆ ನಡೆಸಿದರು. ಫೋನ್ ಮಾತುಕತೆಯ ನಂತರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಭೇಟಿಗೆ ಯತ್ನಿಸಿದರಾದರೂ ಅದು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ರೂಮಿಗೆ ತೆರಳಿ ವಾಪಸ್ ಬಂದರು. ತಿಂಡಿ‌ ಮುಗಿಸಿ ಮತ್ತೆ ಫೋನ್ ಸಂಭಾಷಣೆ ನಡೆಸುತ್ತಲೇ ಕಾರು ಹತ್ತಿ ಬೆಂಗಳೂರಿಗೆ ಹೊರಟರು.

ಪಕ್ಷಕ್ಕೆ ನಾನು ಮುಜುಗರ ತರಿಸಲ್ಲ. ನಾನು ರಾಜೀನಾಮೆ ಕೊಡುತ್ತೇನೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಅವರು ಸಂಘದ ಪ್ರಮುಖರ ಜೊತೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಸೂಚನೆ ನೀಡಿರುವ ಬೆನ್ನಲ್ಲೇ ಸಂಘದ ಪ್ರಮುಖರ ಜೊತೆ ಚರ್ಚೆ ನಡೆಸಿರುವ ಸಚಿವರು, ನಾನು ರಾಜೀನಾಮೆ ಕೊಡುತ್ತೇನೆ, ಪಕ್ಷಕ್ಕೆ ಮುಜುಗರ ತರಲ್ಲ. ಪಕ್ಷದ ತೀರ್ಮಾನಕ್ಕೆ ಬದ್ಧ, ನಾನು ಸಿಎಂ ಜೊತೆಯೂ ಮಾತಾಡಿದ್ದೀನಿ. ಸಿಎಂ ಹೇಳಿದಂಗೆ ಕೇಳುತ್ತೇನೆ ಎಂದು ತಿಳಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಇಂದು ಸಂಜೆ ರಾಜಿನಾಮೆ ಸಾಧ್ಯತೆ:
ಗುತ್ತಿಗೆದಾರ ಸಂತೋಷ್ ಕೆ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಸಚಿವ ಕೆ.ಎಸ್. ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ಹೇಳಿವೆ. ಈ ಮೊದಲು ಶೇಕಡಾ 40 ರಷ್ಟು ಕಮಿಷನ್ ಆರೋಪಕ್ಕೆ ಸಿಲುಕಿದ್ದ ಈಶ್ವರಪ್ಪ, ಸಂತೋಷ್ ಆತ್ಮಹತ್ಯೆ ಪ್ರಕರಣದ ಸುಳಿಯಲ್ಲಿಯೂ ಸಿಕ್ಕಿಬಿದ್ದಿದ್ದಾರೆ. ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರ ಬೆಳಗಾವಿಯ ಸಂತೋಷ್ ಇಂದು (ಏಪ್ರಿಲ್ 12) ಉಡುಪಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಆರೋಪಗಳ ಹಿನ್ನೆಲೆ ಈಶ್ವರಪ್ಪ ರಾಜೀನಾಮೆ ಆಗ್ರಹ ಜೋರಾಗಿ ಕೇಳಿಬಂದಿತ್ತು.

ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆ ಪ್ರಕರಣದ ಬೆಳವಣಿಗೆ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜತೆ ಸಿಎಂ ಬಸವರಾಜ ಬೊಮ್ಮಾಯಿ ಚರ್ಚೆ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ. ಮಂಗಳೂರಿನಲ್ಲಿ ಇರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ಇರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಜತೆ ಮಾತನಾಡಿದ್ದಾರೆ. ಈ ಮಧ್ಯೆ, ಸಂತೋಷ್ ಆತ್ಮಹತ್ಯೆ ಬಗ್ಗೆ ಬಿಜೆಪಿ ಹೈಕಮಾಂಡ್ ಮಾಹಿತಿ ಪಡೆದುಕೊಂಡಿರುವುದು ತಿಳಿದುಬಂದಿದೆ.

ಘಟನೆಯ ಹಿನ್ನೆಲೆ, ಈಶ್ವರಪ್ಪ ರಾಜೀನಾಮೆಗೆ ವಿಪಕ್ಷಗಳು ಒತ್ತಾಯ ಮಾಡಿದ್ದವು. ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರು ಇರುವಲ್ಲಿ ತೆರಳಿ ಮುತ್ತಿಗೆ ಹಾಕುವ, ಪ್ರತಿಭಟನೆ ನಡೆಸುವ ಕಾರ್ಯವನ್ನು ಕೂಡ ಮಾಡಿದ್ದರು. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದ ಮಂಗಳೂರಿನ ಹೊಟೇಲ್ಗೆ ಕೂಡ ಕೈ ನಾಯಕರು, ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆಗೆ ಮುಂದಾಗಿದ್ದರು. ಘಟನೆ ಹಿನ್ನೆಲೆ ಇಂದು ರಾಜ್ಯಪಾಲರನ್ನು ಭೇಟಿಯಾದ ಕಾಂಗ್ರೆಸ್ ನಿಯೋಗ ಈಶ್ವರಪ್ಪ ರಾಜಿನಾಮೆಗೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

By dtv

Leave a Reply

Your email address will not be published. Required fields are marked *

error: Content is protected !!