ದುಬೈ: ಯು.ಎ.ಇ ಯ ವಿವಿಧ ಪ್ರದೇಶಗಳಲ್ಲಿ ರಕ್ತದಾನ ಶಿಬಿರಗಳ ಆಯೋಜನೆ ಮೂಲಕ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯು ವಿಶೇಷ ಸಾಧನೆ ಮಾಡಿದ್ದು, ಈ ರೀತಿಯ ಸಾಧನೆ ಮಾಡಿದ ಕರ್ನಾಟಕದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಳೆದ ಎಂಟು ವರ್ಷಗಳಿಂದ ದೇಶ ವಿದೇಶಗಳಲ್ಲಿ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ದುಬೈ ಘಟಕದ ಅಧೀನದಲ್ಲಿ 2018 ರಲ್ಲಿ ಮೊದಲ ಬಾರಿಗೆ ರಕ್ತದಾನ ಶಿಬಿರ ನಡೆಯಿತು. ಮುಂದಿನ ದಿನಗಳಲ್ಲಿ ಯು.ಎ.ಇ ಯ ದುಬೈ, ಅಬುಧಾಬಿ, ಶಾರ್ಜಾ, ರಾಸ್ ಅಲ್ ಖೈಮಾ ಸೇರಿದಂತೆ ನಾಲ್ಕು ಪ್ರದೇಶಗಳಲ್ಲಿ ಒಟ್ಟು 26 ರಕ್ತದಾನ ಶಿಬಿರ ನಡೆಸಲಾಯಿತು. ಈ ಮೂಲಕ ಸುಮಾರು 1500 ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹಿಸಿ ಹೊಸ ಇತಿಹಾಸ ಸೃಷ್ಟಿಸಿದೆ.
ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಪ್ರತಿಯೊಂದು ರಕ್ತದಾನ ಶಿಬಿರಕ್ಕೂ ಸ್ಥಳೀಯ ಸಂಸ್ಥೆಗಳ ಸಹಕಾರ ಇದ್ದು, ಬದ್ರಿಯಾ ಫ್ರೆಂಡ್ಸ್ ಯು.ಎ.ಇ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದೆ. ಉಳಿದಂತೆ ಕೆ.ಎಸ್.ಸಿ.ಸಿ, ಡಿ.ಕೆ.ಎಸ್.ಸಿ, ಅಬುಧಾಬಿ ಕಾಸ್ರೋಟ್ಟಾರ್, ಆನಿವಾಸಿ ಕನ್ನಡಿಗ, ಝಮಾನ್ ಬಾಯ್ಸ್ ಎಂಬಿತ್ಯಾದಿ ಸಂಸ್ಥೆಯ ಸಹಕಾರದೊಂದಿಗೆ ಶಿಬಿರಗಳ ಆಯೋಜನೆ ಮಾಡಲಾಗಿದೆ.
2022 ನೇ ಮಾರ್ಚ್ ತಿಂಗಳಲ್ಲಿ ಸತತ ನಾಲ್ಕು ವಾರಗಳಲ್ಲಿ ನಾಲ್ಕು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಇದು ದುಬೈ ಇತಿಹಾಸದಲ್ಲಿ ವಿಶೇಷ ಪ್ರಯತ್ನವಾಗಿದೆ. ಇದೇ ರೀತಿ ಸೌದಿ ಅರೇಬಿಯಾ, ಕತಾರ್, ಬಹ್ರೈನ್, ಒಮಾನ್, ಕುವೈತ್ ದೇಶಗಳಲ್ಲಿ ಸಂಸ್ಥೆಯ ಕಾರ್ಯ ನಿರ್ವಾಹಕರು ನೆಲೆಸಿದ್ದು, ಅಲ್ಲೂ ಕೂಡ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದೆ. ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ದುಬೈ ಘಟಕದ ಅಧ್ಯಕ್ಷರಾಗಿ ನಝೀರ್ ಬಿಕರ್ನಕಟ್ಟೆ, ಪದಾಧಿಕಾರಿಗಳಾಗಿ ಅರ್ಷಾದ್ ಬಾಂಬಿಲ, ಸಾಧಿಕ್ ಪುತ್ತೂರು, ಜಬ್ಬಾರ್ ಕಲ್ಲಡ್ಕ, ಸಮೀರ್ ಉಡುಪಿ, ಇಲ್ಯಾಸ್ ಕಂದಕ್, ಇರ್ಫಾನ್ ಕಲ್ಲಡ್ಕ ಸಹಕರಿಸಿದ್ದಾರೆ.
ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಸಾಧನೆಯನ್ನು ಮತ್ತು ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಮೆಚ್ಚಿ ದುಬೈ ಹೆಲ್ತ್ ಅಥಾರಿಟಿ (ಡಿ.ಎಚ್.ಎ) 2020 ನೇ ಸಾಲಿನ ಗೌರವ ಪುರಸ್ಕಾರ ನೀಡಿ ಗೌರವಿಸಿದೆ. ಜೊತೆಗೆ ಕೆ.ಎಸ್.ಸಿ.ಸಿ ಸಂಸ್ಥೆಯೂ ಗೌರವ ಪುರಸ್ಕಾರ ನೀಡಿ ಗೌರವಿಸಿದೆ.
ಕಳೆದ ಒಂಭತ್ತು ವರ್ಷಗಳಿಂದ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ದೇಶ, ವಿದೇಶಗಳಲ್ಲಿ ಕಾರ್ಯಚರಿಸುತ್ತಿದ್ದು, ದಾಖಲೆಯ ಮುನ್ನೂರೈವತ್ತು ರಕ್ತದಾನ ಶಿಬಿರ ಆಯೋಜಿಸಿದೆ. ಇದಲ್ಲದೆ, ರಕ್ತದಾನ ಮಾಹಿತಿ ಕಾರ್ಯಾಗಾರ, ನಿರಾಶ್ರಿತರಿಗೆ ಸೇವೆ, ಸಹಾಯ, ರೋಗಿಗಳಿಗೆ ಸಹಾಯ, ಬಡವರಿಗೆ ಮನೆ ನಿರ್ಮಾಣ ಮೊದಲಾದ ಸಾಮಾಜಿಕ ಚಟುವಟಿಕೆಗಳಲ್ಲೂ ಭಾಗವಹಿಸಿದೆ. ಬ್ಲಡ್ ಡೋನರ್ಸ್ ಮಂಗಳೂರು ರಿ ಸಂಸ್ಥೆಯ ಸೇವೆಯನ್ನು ಮನಗಂಡು ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳು ನೀಡಿ ಅಭಿನಂದಿಸಿದೆ.
ವರದಿ : ನಿಜಾಮುದ್ದೀನ್ ಉಪ್ಪಿನಂಗಡಿ ತಬೂಕ್