ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಇಂದಿನ (ಮಂಗಳವಾರ) ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ ಸಿ ಬಿ 18 ರನ್‌ಗಳಿಂದ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತ್ತು. ಇದರೊಂದಿಗೆ ಲಖನೌ ಸೂಪರ್ ಜೈಂಟ್ಸ್‌ಗೆ 182 ರನ್‌ಗಳ ಗೆಲುವಿನ ಗುರಿ ನೀಡಿತ್ತು.
ಆದರೆ ಗುರಿ ಬೆನ್ನಟ್ಟಲು ವಿಫಲವಾದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 163 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಫಫ್ ಡುಪ್ಲೆಸಿ ಬಳಗಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ಮೊತ್ತ 7 ರನ್ ಆಗಿದ್ದಾಲೇ ದುಷ್ಮತ್ ಚಮೀರ ಬೌಲಿಂಗ್‌ನಲ್ಲಿ ಆರಂಭಿಕ ಆಟಗಾರ ಅನುಜ್ ರಾವತ್ (4) ಅವರು ವಿಕೆಟ್ ಕೀಪರ್ ರಾಹುಲ್‌ಗೆ ಕ್ಯಾಚ್ ನೀಡಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಇದರ ಬೆನ್ನಲ್ಲೇ ಚಮೀರ ಬೌಲಿಂಗ್‌ನಲ್ಲೇ ವಿರಾಟ್ ಕೊಹ್ಲಿ (0) ದೀಪಕ್ ಹೂಡಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಬಳಿಕ ಕ್ರೀಸಿಗಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ ದೊಡ್ಡ ಹೊಡೆತಗಳಿಗೆ ಮುಂದಾದರೂ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. 11 ಎಸೆತಗಳಲ್ಲಿ 24 ರನ್ ಗಳಿಸಿದ್ದ ಅವರು ಕೃಣಾಲ್ ಪಾಂಡ್ಯ ಎಸೆತದಲ್ಲಿ ಹೋಲ್ಡರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಸುಯಶ್ ಎಸ್. ಪ್ರಭುದೇಸಾಯಿ ಕೇವಲ 10 ರನ್ ಗಳಿಸಿ ಹೋಲ್ಡರ್ ಬೌಲಿಂಗ್‌ನಲ್ಲಿ ಔಟಾದರೆ ಶಹಬಾಜ್ ಅಹಮ್ಮದ್ 26 ರನ್ ಗಳಿಸಿದ್ದಾಗ ರನೌಟ್ ಬಲೆಗೆ ಬಿದ್ದರು.
ಡುಪ್ಲೆಸಿ ಕೆಚ್ಚೆದೆಯ ಆಟ:
ಒಂದೆಡೆ ವಿಕೆಟ್‌ಗಳು ಉರುಳುತ್ತಾ ಸಾಗಿದರೂ ಕೆಚ್ಚೆದೆಯ ಆಟವಾಡಿದ ನಾಯಕ ಫಫ್ ಡುಪ್ಲೆಸಿ ಕೇವಲ 63 ಎಸೆತಗಳಲ್ಲಿ 96 ರನ್ ಗಳಿಸಿ ಕೇವಲ 4 ರನ್ ಅಂತರದಿಂದ ಶತಕ ವಂಚಿತರಾದರು.
ಕೊನೆಯ ಹಂತದಲ್ಲಿ ಎಂದಿನಂತೆಯೇ ಚುರುಕಿನಿಂದ ಬ್ಯಾಟ್ ಬೀಸಿದ ದಿನೇಶ್ ಕಾರ್ತಿಕ್ 8 ಎಸೆತಗಳಲ್ಲಿ 13 ರನ್ ಗಳಿಸುವ ಮೂಲಕ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿತು.
182 ರನ್‌ಗಳ ಸ್ಪರ್ಧಾತ್ಮಕ ಟಾರ್ಗೆಟ್ ಬೆನ್ನತ್ತಿದ ಲಕ್ನೋ ತಂಡವನ್ನು ನಿಯಂತ್ರಿಸುವಲ್ಲಿ ವೇಗಿ ಜೋಶ್ ಹ್ಯಾಝಲ್ವುಡ್ ಯಶಸ್ವಿಯಾದರು. 4 ಓವರ್ನಲ್ಲಿ ಕೇವಲ 25 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಹ್ಯಾಝಲ್ವುಡ್ ಲಕ್ನೋ ತಂಡಕ್ಕೆ ಆಘಾತ ನೀಡಿದರು. ಪರಿಣಾಮ ಅಂತಿಮವಾಗಿ ಲಕ್ನೋ ಸೂಪರ್ ಜೈಂಟ್ಸ್ 8 ವಿಕೆಟ್ ಕಳೆದುಕೊಂಡು 163 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಆರ್‌ಸಿಬಿ ತಂಡವು 18 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ಪಾಯಿಂಟ್ ಟೇಬಲ್ನಲ್ಲಿ 2ನೇ ಸ್ಥಾನಕ್ಕೇರಿದೆ.
ಆರ್‌ಸಿಬಿ ಗುರಿ ಬೆನ್ನಟ್ಟಿದ ಲಕ್ನೋ ತಂಡ ಆರಂಭದಲ್ಲೇ ಎಡವಿತು. ತಂಡದ ಮೊತ್ತ 17 ಇರುವಾಗಲೇ ಜೋಶ್ ಹ್ಯಾಜಲ್ ವುಡ್ ಬೌಲಿಂಗ್‌ನಲ್ಲಿ ಕ್ವಿಂಟನ್ ಡಿಕಾಕ್ ಕೇವಲ 3 ರನ್ ಗಳಿಸಿ ಮ್ಯಾಕ್ಸ್‌ವೆಲ್‌ಗೆ ಕ್ಯಾಚ್ ಒಪ್ಪಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಹ್ಯಾಜಲ್ ವುಡ್ ಬೌಲಿಂಗಲ್ಲೇ ಮನಿಶ್ ಪಾಂಡೆ ಕೇವಲ 6 ರನ್ ಗಳಿಸಿ ಪಟೇಲ್‌ಗೆ ಕ್ಯಾಚ್ ನೀಡಿ ಪೆವಿಲಿಯನ್‌ನತ್ತ ಸಾಗಿದರು.
ಆರಂಭದಲ್ಲಿ ಭರವಸೆಯಿಂದ ಆಟವಾಡಿದ ನಾಯಕ ಕೆ.ಎಲ್.ರಾಹುಲ್ 30 ರನ್ ಗಳಿಸಿ ಹರ್ಷಲ್ ಪಟೇಲ್ ಬೌಲಿಂಗ್‌ನಲ್ಲಿ ದಿನೇಶ್ ಕಾರ್ತಿಕ್ ಕೈಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಮಧ್ಯೆಯೂ ಧೃತಿಗೆಡದೇ ಉತ್ತಮ ಆಟವಾಡಿದ ಕೃಣಾಲ್ ಪಾಂಡ್ಯ ಅರ್ಧ ಶತಕ ವಂಚಿತರಾಗಿ ಔಟ್ ಆದರು. 28 ಎಸೆತಕ್ಕೆ 42 ರನ್ ಸಿಡಿಸಿ ಗ್ಲೆನ್ ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ಶಹಬಾಜ್ ಅಹ್ಮದ್ ಅವರಿಗೆ ಕ್ಯಾಚ್ ಒಪ್ಪಿಸಿ ನಡೆದರು. ಮಾರ್ಕಸ್ ಸ್ಟೋಯಿನಿಸ್ 24 ರನ್ ಸಿಡಿಸಿ ಔಟ್ ಆದರು. ದೀಪಕ್ ಹೂಡಾ (13) ಗಳಿಸಿದರು. ಆ ಮೂಲಕ ಲಕ್ನೋ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಲಷ್ಟೇ ಶಕ್ತವಾಯಿತು.
ಆರ್‌ಸಿಬಿ ವೇಗಿ ಜೋಶ್ ಹ್ಯಾಜಲ್‌ವುಡ್ ತಮ್ಮ ಮಿಂಚಿನ ಬೌಲಿಂಗ್ ಮೂಲಕ ಲಕ್ನೋ ತಂಡವನ್ನು ಕಟ್ಟಿಹಾಕಿದರು. ಪಂದ್ಯದಲ್ಲಿ ಕೇವಲ 25 ನೀಡಿ ಮೂಲಕ 4 ವಿಕೆಟ್‌ಗಳನ್ನು ಗಳಿಸುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಡುಪ್ಲೆಸಿಯಷ್ಟೇ ಪ್ರಮುಖ ಪಾತ್ರ ವಹಿಸಿದರು. ಹರ್ಷಲ್ ಪಟೇಲ್ 2 ವಿಕೆಟ್ ಕಬಳಿಸಿದರೆ, ಮ್ಯಾಕ್ಸ್‌ವೆಲ್ 1 ವಿಕೆಟ್ ಪಡೆದರು.