ತಿರುಪತಿ: ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆಗಾಗಿ ದಾಖಲಾಗಿದ್ದ 10 ವರ್ಷದ ಮೃತಪಟ್ಟ ಮಗನ ಮೃತದೇಹ ಸಾಗಿಸಲು ಹಣವಿಲ್ಲದೇ ಬೈಕ್‌ನಲ್ಲಿ 90 ಕಿ.ಮೀ ಪ್ರಯಾಣ ಮಾಡಿದ ಅಮಾನವೀಯ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ.
ಘಟನೆ ವೀಡಿಯೋ ಇದೀಗ ವೈರಲ್ ಆಗಿದ್ದು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮೃತಪಟ್ಟ ಬಾಲಕ ಜೇಸವಾ (10) ಎಂದು ತಿಳಿದು ಬಂದಿದೆ.
10 ವರ್ಷದ ಬಾಲಕನೊಬ್ಬ ಅನಾರೋಗ್ಯದ ಕಾರಣ ಆರ್‌ಯುಐಎ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ವೇಳೆ ಶವ ಸಾಗಿಸಲು ಅಂಬುಲೆನ್ಸ್ ಚಾಲಕನನ್ನು ಕೇಳಿಕೊಂಡಾಗ 90 ಕೀ.ಮೀಗೆ 10,000 ಬಾಡಿಗೆ ಕೇಳಿದ್ದಾನೆ.
ಚಾಲಕನ ತಂದೆ ಬಡ ಕೂಲಿ ಕಾರ್ಮಿಕನಾಗಿರುವುದರಿಂದ ಅಷ್ಟೊಂದು ಹಣವಿಲ್ಲದೆ ಸಂಬಂಧಿಕರ ಬೈಕ್‌ನ ಹಿಂಬದಿ ಕುಳಿತು ಶವವನ್ನು ತೋಳಲ್ಲಿ ಮಲಗಿಸಿ 90 ಕೀ.ಮೀ ಪ್ರಯಾಣ ಮಾಡಿದ್ದಾರೆ. ಶವ ತೆಗೆದುಕೊಂಡು ಹೋಗುತ್ತಿರುವ ವೀಡಿಯೋ ವೈರಲ್ ಆಗಿದೆ.
ಈ ವೀಡಿಯೋವನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಅಮಾನವೀಯ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ವರದಿಯ ಪ್ರಕಾರ ದೊಡ್ಡ ಮೊತ್ತವನ್ನು ಕೊಡಲಾಗದ ತಂದೆಯು ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದರು. ಅವರು ಮತ್ತೊಂದು ಆಂಬುಲೆನ್ಸ್ ಮೂಲಕ ಉಚಿತವಾಗಿ ಮೃತ ದೇಹ ಸಾಗಿಸಲು ವ್ಯವಸ್ಥೆ ಮಾಡಿದ್ದರು.
ಆದರೆ, ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಮತ್ತೊಂದು ವಾಹನದಲ್ಲಿ ಮೃತ ದೇಹವನ್ನು ಸಾಗಿಸಲು ಅವಕಾಶ ಮಾಡಿಕೊಡದೆ, ತನ್ನ ಆಂಬುಲೆನ್ಸ್‌ನಲ್ಲೇ ಸಾಗಿಸುವಂತೆ ಪಟ್ಟು ಹಿಡಿದಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ.ತನಿಖೆಯಿಂದಷ್ಟೆ ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ.