ಪುಣೆ: ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 29 ರನ್ ಅಂತರದುಂದ ಹೀನಾಯವಾಗಿ ಸೋಲನುಭವಿಸಿದೆ. ಈ ಮೂಲಕ ಪಾಯಿಂಟ್ ಟೇಬಲ್’ನಲ್ಲಿ ರಾಜಸ್ಥಾನ್ ಆಗ್ರಸ್ಥಾನಕ್ಕೇರಿದೆ.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ 20 ಓವರ್‌ಗಳಲ್ಲಿ 8 ವಿಕೆಟಿಗೆ 144 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಬೆಂಗಳೂರು 19.3 ಓವರ್‌ಗಳಲ್ಲಿ 115 ರನ್‌ಗಳಿಗೆ ಆಲೌಟಾಯಿತು.
ಕೊಹ್ಲಿ, ಪ್ಲೆಸಿಸ್ ಸೇರಿದಂತೆ ದಿಗ್ಗಜರೆಲ್ಲ ಈ ಪಂದ್ಯದಲ್ಲೂ ವಿಫಲರಾದರು. ಇದು ಬೆಂಗಳೂರಿನ ರನ್ ಬೆನ್ನತ್ತುವಿಕೆಗೆ ಭಾರೀ ಹೊಡೆತ ನೀಡಿತು. ರಾಜಸ್ಥಾನ್ ಪರ ಕುಲದೀಪ್ ಸೇನ್ (20ಕ್ಕೆ 4), ಆರ್.ಅಶ್ವಿನ್ (17ಕ್ಕೆ 3) ಅದ್ಭುತ ಬೌಲಿಂಗ್ ಸಂಘಟಿಸಿದರು.
ಮಹಾರಾಷ್ಟ್ರ ರಾಜ್ಯ ಕ್ರಿಕೆಟ್ ಸಂಸ್ಥೆ ಅಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್‌ಗಳು ಆರಂಭಿಕ ಆಘಾತ ನೀಡಿದರು. ಬಹುಬೇಗ ಬಟ್ಲರ್ ವಿಕೆಟ್ ಉರುಳಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ರನ್ ಓಟಕ್ಕೆ ಕಡಿವಾಣ ಹಾಕಿದ್ದರಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 144 ರನ್ ದಾಖಲಾಯಿತು.
ಮಧ್ಯಮ ಕ್ರಮಾಂಕದಲ್ಲಿ ಆಡಿದ ರಿಯಾನ್ ಪರಾಗ್ ಅವರು ತಂಡಕ್ಕೆ ಆಸರೆಯಾದರು. 30 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ತಂಡದ ಸ್ಕೋರ್ 140 ರನ್ ದಾಟಲು ನೆರವಾದರು. 4 ಸಿಕ್ಸರ್ ಮತ್ತು ಮೂರು ಫೋರ್ ಒಳಗೊಂಡ 56 ರನ್ ಗಳಿಸಿದರು.
ಇನಿಂಗ್ಸ್ ಆರಂಭಿಸಿದ ಜೋಸ್ ಬಟ್ಲರ್ ಮತ್ತು ದೇವದತ್ತ ಪಡಿಕ್ಕಲ್ ಈ ಬಾರಿ ಮಿಂಚಲು ವಿಫಲರಾದರು. ಒನ್‌ಡೌನ್‌ನಲ್ಲಿ ಬಂದ ಆರ್.ಅಶ್ವಿನ್ 17 ರನ್ನಿಗೆ ಔಟಾದರು. ಅದೇ ಮೊತ್ತಕ್ಕೆ ಬಟ್ಲರ್ ಅವರ ವಿಕೆಟನ್ನು ಹೇಝಲ್‌ವುಡ್ ಹಾರಿಸಿದರು. ಸತತ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ಬಟ್ಲರ್ ಇಲ್ಲಿ 9 ಎಸೆತಗಳಿಂದ ಕೇವಲ 8 ರನ್ ಮಾಡಿದರು.
33 ರನ್ನಿಗೆ ಅಗ್ರಕ್ರಮಾಂಕದ ಮೂವರು ಆಟಗಾರರನ್ನು ಕಳೆದುಕೊಂಡ ರಾಜಸ್ಥಾನ್ ದೊಡ್ಡ ಸಂಕಷ್ಟಕ್ಕೆ ಬಿತ್ತು. ಆಗಲೇ ನಾಲ್ಕು ಓವರ್ ಮುಗಿದಿತ್ತು. ಆಬಳಿಕ ನಾಯಕ ಸಂಜು ಸ್ಯಾಮ್ಸನ್ ಮತ್ತು ಈ ಪಂದ್ಯಕ್ಕಾಗಿ ಸೇರ್ಪಡೆಯಾದ ಡ್ಯಾರಿಲ್ ಮಿಚೆಲ್ ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರು. ಆರ್‌ಸಿಬಿಯ ನಿಖರ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಿದ ಅವರಿಬ್ಬರನ್ನು ನಿಧಾನಗತಿಯಲ್ಲಿ ತಂಡದ ಮೊತ್ತ ಏರಿಸುವ ಪ್ರಯತ್ನ ಮಾಡಿದರು. ನಾಲ್ಕನೇ ವಿಕೆಟಿಗೆ ಅವರಿಬ್ಬರು 35 ರನ್ ಪೇರಿಸಿ ಬೇರ್ಪಟ್ಟರು. 27 ರನ್ ಗಳಿಸಿದ ಸ್ಯಾಮ್ಸನ್ ರಿವರ್ಸ್ ಸ್ವೀಪ್ ಮಾಡುವ ಯತ್ನದ ವೇಳೆ ಕ್ಲೀನ್‌ಬೌಲ್ಡ್ ಆದರು. ಮಿಚೆಲ್ ಮತ್ತೆ ರಿಯಾನ್ ಪರಾಗ್ ಜತೆಗೂಡಿ ಐದನೇ ವಿಕೆಟಿಗೆ 31 ರನ್ ಜತೆಯಾಟ ನಡೆಸಿದರು. ಈ ನಡುವೆ 15ನೇ ಓವರ್ ಮುಗಿದಾಗ ತಂಡದ ಮೊತ್ತ 100 ರನ್ ತಲಪಿತ್ತು. ಬಿಗು ದಾಳಿ ಸಂಘಟಿಸಿದ ಸಿರಾಜ್, ಹೇಝಲ್‌ವುಡ್ ಮತ್ತು ಹಸರಂಗ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ರಾಜಸ್ಥಾನ 20 ಓವರ್, 144/8 (ರಿಯಾನ್ ಪರಾಗ್ 56, ಜೋಶ್ ಹೇಝಲ್‌ವುಡ್ 19ಕ್ಕೆ 2, ಹಸರಂಗ 23ಕ್ಕೆ 2).
ಬೆಂಗಳೂರು 19.3 ಓವರ್, 115 (ಪ್ಲೆಸಿಸ್ 23, ಕುಲದೀಪ್ ಸೇನ್ 20ಕ್ಕೆ 4, ಅಶ್ವಿನ್ 17ಕ್ಕೆ 3).