ಭಟ್ಕಳ, ಮೇ 1: ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಆಗಿರುವುದರಿಂದ ಭಟ್ಕಳದಲ್ಲಿ ಸೋಮವಾರ(ಮೇ 2) ಈದುಲ್ ಫಿತ್ರ್ ಆಚರಿಸಲು ಜಮಾಅತುಲ್ ಮುಸ್ಲಿಮೀನ್ ಇದರ ಪ್ರಧಾನ ಖಾಝಿ ಮೌಲನಾ ಅಬ್ದುಲ್ ರಬ್ ಖತಿಬಿ ನದ್ವಿ ಹಾಗೂ ಖಲೀಫ ಜಮಾಅತುಲ್ ಮುಸ್ಲಿಮೀನ್ ಇದರ ಪ್ರಧಾನ ಖಾಝಿ ಮೌಲನಾ ಗ್ವಾಜ ಮುಹಿಯುದ್ದೀನ್ ಅಕ್ರಮಿ ನದ್ವಿ ಇವರು ಜಂಟಿಯಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಭಟ್ಕಳ ಸೇರಿದಂತೆ ಉಡುಪಿ, ಮಣಿಪಾಲ, ಮಲ್ಪೆ, ಹೂಡೆ, ಗಂಗೊಳ್ಳಿ, ಬ್ರಹ್ಮಾವರದ ಕೆಲವು ಮೊಹಲ್ಲಾಗಳಲ್ಲಿ ನಾಳೆಯೇ ಈದುಲ್ ಫಿತರ್ ಹಬ್ಬ ಆಚರಿಸುವಂತೆ ಘೋಷನೆ ಮಾಡಲಾಗಿದೆ.
ದಕ್ಷಿನ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ನಿರ್ಧರಿಸಿದಂತೆ ಉಪವಾಸ ಮುಂದುವರಿಕೆ ತೀರ್ಮಾನಕ್ಕೆ ಬರಲಾಗಿದ್ದು , ಮೇ 3 ರಂದು ಈದುಲ್ ಫಿತ್ ಆಚರಿಸಲಾಗುವುದು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ .
ದಕ್ಷಿಣ ಕನ್ನಡ, ಕೊಡಗು, ಬೆಂಗಳೂರು ಸೇರಿದಂತೆ ಅನೇಕ ಕಡೆ ನಾಳೆ ಉಪವಾಸ ಮುಂದುವರೆಯಲಿದ್ದು, ಮೇ 3 ರಂದು ಈದ್ ಹಬ್ಬ ಆಚರಿಸಲಾಗುತ್ತದೆ.

ಖಾಝಿಗಳಿಂದ ಸ್ಪಷ್ಟನೆ: ಈ ಮೊದಲು ನಿಗದಿಪಡಿಸಿದಂತೆ 2022 ಮೇ 3 ಮಂಗಳವಾರ ಈದುಲ್ ಫಿತ್ರ್ ಆಚರಿಸುವುದಾಗಿಯೂ ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ತಿಳಿಸಿದ್ದಾರೆ.