ಮಂಗಳೂರು: ಪಿಎಸ್‌ಐ ಹುದ್ದೆಗಳ ನೇಮಕಾತಿ ಸಂಬಂಧ ನಡೆದ ಪರೀಕ್ಷೆಯಲ್ಲಿ ಅಕ್ರಮ ಬಹಿರಂಗವಾದ ಬೆನ್ನಲ್ಲೇ ಕರ್ನಾಟಕ ಲೋಕಸೇವಾ ಆಯೋಗ ಗೆಜೆಟೆಡ್ ಪ್ರೊಬೆಷನರಿ ಹುದ್ದೆ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಮಂಗಳೂರು ಮೂಲದ ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಎಸಿ, ತಹಶೀಲ್ದಾರ್, ಡಿವೈಎಸ್ಪಿ ಹಂತದ ‘ಎ’ ಗ್ರೇಡ್ ಹುದ್ದೆಗಳು ಕೋಟಿ ಕೋಟಿಗೆ ಮಾರಾಟ ಮಾಡಿದ್ದಾರೆ, ಈ ಅಕ್ರಮದ ದಾಖಲೆಗಳನ್ನು ಯಾವುದೇ ತನಿಖಾಧಿಕಾರಿಗಳಿಗೆ ನೀಡಲು ಸಿದ್ದ ಎಂದು 2015ನೇ ಬ್ಯಾಚ್ ನ KPSC ಅಭ್ಯರ್ಥಿ ಮಂಗಳೂರಿನ ಯು.ಟಿ.ಫರ್ಝಾನ ಗಂಭೀರ ಆರೋಪ ಮಾಡಿದ್ದಾರೆ.
2015 ರ ಬ್ಯಾಚ್ ನ ಕೆಪಿಎಸ್ಸಿ ಅಭ್ಯರ್ಥಿ ಯು.ಟಿ.ಫರ್ಝಾನಾ ಹೇಳಿಕೆ ನೀಡಿದ್ದು, ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಹುದ್ದೆಗಳು ಕೋಟಿ ಕೋಟಿಗೆ ಸೇಲ್ ಆಗಿವೆ ಎಂದು ಆರೋಪಿಸಿದ್ದಾರೆ. 2015ರ ಬ್ಯಾಚ್ ನ ಕೆಪಿಎಸ್ಸಿ ಪರೀಕ್ಷೆ 2017ರಲ್ಲಿ ನಡೆದು 2019ರ ಡಿಸೆಂಬರ್ ನಲ್ಲಿ ಫಲಿತಾಂಶ ಬಂದಾಗ ಪ್ರತಿಭಾನ್ವಿತರ ಹೆಸರು ಲಿಸ್ಟ್ ನಲ್ಲಿ ಇರಲಿಲ್ಲ. ಈ ಅನುಮಾನದ ಹಿನ್ನೆಲೆ ನಮ್ಮ ಸಬ್ಜೆಕ್ಟ್ ವೈಸ್ ಅಂಕಗಳನ್ನು ಕೇಳಿದೆವು.
ಆದರೆ ಅವರು ನಮಗೆ ಅಂಕಗಳನ್ನು ಕೊಡದ ಕಾರಣ ಹೋರಾಟ ಮಾಡಿದೆವು. ಆ ಬಳಿಕ ಫಲಿತಾಂಶ ಬಂದ 62 ದಿನಗಳ ಬಳಿಕ ಅಂಕಗಳನ್ನು ಕೊಟ್ಟರು. ಆ ಅಂಕಗಳು ಮೂರ್ನಾಲ್ಕು ವಿಷಯಗಳಲ್ಲಿ ಒಂದೇ ರೀತಿ ಇತ್ತು. ನಮ್ಮ ಒಟ್ಟು ಅಂಕಕ್ಕೆ ಸರಿದೂಗಿಸಲು ಮನಸೋ ಇಚ್ಚೆ ಅಂಕ ಕೊಟ್ಟಿದ್ದರು. ಹೀಗಾಗಿ ಮತ್ತೆ ಅನುಮಾನ ಹೆಚ್ಚಾಗಿ ಉತ್ತರ ಪತ್ರಿಕೆ ತೋರಿಸಲು ಕೇಳಿದೆವು. ಆದರೆ ಅದನ್ನ ಕೊಡೋದೇ ಇಲ್ಲ ಅಂದಾಗ ನಾವು ಹೈ ಕೋರ್ಟ್ ರಿಟ್ ಹಾಕಿದೆವು. ಹೈ ಕೋರ್ಟ್ ಉತ್ತರ ಪತ್ರಿಕೆ ಕೊಡಿ ಅಂತ ಹೇಳಿದ್ರೂ ಕೆಪಿಎಸ್ಸಿ ಮೇಲ್ಮನವಿ ಸಲ್ಲಿಸಿ ತಪ್ಪಿಸಿಕೊಳ್ತಾ ಇದೆ ಎಂದು ಆರೋಪಿಸಿದ್ದಾರೆ.
ಪಿಎಸ್ಸೈ ಅಕ್ರಮದ ತನಿಖಾಧಿಕಾರಿಗಳು ಕೆಪಿಎಸ್ಸಿ ಅಕ್ರಮದ ತನಿಖೆಯನ್ನೂ ನಡೆಸಲಿ. ಕೆಪಿಎಸ್ಸಿ ಒಳಗಿರೋ ಸಿಬ್ಬಂದಿಯೇ 2015ರ ಬ್ಯಾಚ್ ಅಕ್ರಮದ ಬಗ್ಗೆ ಹೇಳಿದ್ದಾರೆ. ಕೋಟಿ ಕೋಟಿಗೆ ಎಸಿ, ತಹಶೀಲ್ದಾರ್, ಡಿವೈಎಸ್ಪಿ ಹುದ್ದೆ ಸೇಲ್ ಮಾಡಿದ್ದಾರೆ. ಈ ಅಕ್ರಮದ ದಾಖಲೆ ತನಿಖಾಧಿಕಾರಿಗಳಿಗೆ ನೀಡಲು ಸಿದ್ದ. ಪಿಎಸ್ಸೈ ದಂಧೆಯಲ್ಲಿದ್ದವರನ್ನ ಮತ್ತಷ್ಟು ತನಿಖೆ ಮಾಡಿದ್ರೆ ಕೆಪಿಎಸ್ಸಿ ಅಕ್ರಮ ಹೊರಗೆ ಬರುತ್ತೆ.
ಈ ಹಿಂದೆ 2008, 2010, 2011, 2014ರ ಬ್ಯಾಚ್ ನ ಉತ್ತರ ಪತ್ರಿಕೆಗಳನ್ನು ಅಭ್ಯರ್ಥಿಗಳಿಗೆ ಕೊಡಲಾಗಿದೆ. ಮಾಹಿತಿ ಹಕ್ಕಿನಡಿ ಕೇಳಿದ್ದಕ್ಕೆ ಸಿಡಿ ಮುಖಾಂತರ ಕೊಡಲಾಗಿದೆ. ಆದ್ರೆ 2015ರ ಬ್ಯಾಚ್ ನಲ್ಲಿ ಅಕ್ರಮ ನಡೆದಿರೋ ಕಾರಣ ಉತ್ತರ ಪತ್ರಿಕೆ ಕೊಡ್ತಾ ಇಲ್ಲ. ಒಎಂಆರ್ ಶೀಟ್ ಗಳನ್ನ ತಿದ್ದುವ ಕೆಲಸ ಕೆಪಿಎಸ್ಸಿಯ ಕೆಲವರು ಮಾಡಿದ್ದಾರೆ. ಡಿಜಿಟಲ್ ಮೌಲ್ಯಮಾಪನ ನಡೆದರೂ ಎಡಿಟೆಟ್ ನೋಟ್ ಪ್ಯಾಡ್ ನಲ್ಲಿ ತಿದ್ದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈಗಾಗಲೇ ಅಕ್ರಮದ ವಿರುದ್ಧ 52 ಅಭ್ಯರ್ಥಿಗಳೂ ಕಾನೂನು ಹೋರಾಟ ಮಾಡುತ್ತಿದ್ದಾರೆ. 2017 ರಲ್ಲಿ ನಾನು ಪರೀಕ್ಷೆ ಬರೆದಿದ್ದೆ 2019ರಲ್ಲಿ ಫಲಿತಾಂಶ ಬಂದಿತ್ತು. ಫಲಿತಾಂಶದಲ್ಲಿ ಅನುಮಾನ ಬಂದಿರುವ ಹಿನ್ನೆಲೆಯಲ್ಲಿ ಎಲ್ಲಾ ವಿಷಯದ ಅಂಕಗಳನ್ನು ಅಭ್ಯರ್ಥಿಗಳು ಕೇಳಿದ್ದರು. ಆದರೆ ಅಂಕಪಟ್ಟಿ ನೀಡಲು ಕೆಪಿಎಸ್‌ಸಿ ನಿರಾಕರಿಸಿದೆ. ಉತ್ತರ ಪತ್ರಿಕೆ ತೋರಿಸಲು ಹೈಕೋರ್ಟ್ ಆದೇಶಿಸಿದ್ರೂ ಕೂಡ ಕೆಪಿಎಸ್‌ಸಿ ನಿರ್ಲಕ್ಷ್ಯ ತೋರಿದೆ ಎಂದು ಫರ್ಝಾನಾ ಆರೋಪಿಸಿದ್ದಾರೆ.