ದಾವಣಗೆರೆ: ಸಂಚರಿಸುತ್ತಿದ್ದ ಬೈಕ್ ನಿಂದ ಆಯ ತಪ್ಪಿ ಲಾರಿಯಡಿಗೆ ಬಿದ್ದು ಒಂದೇ ಮನೆಯ ಮೂವರು ಮೃತಪಟ್ಟ ಘಟನೆ ದಾವಣಗೆರೆ ನಗರದ ರಾಷ್ಟ್ರೀಯ ಹೆದ್ದಾರಿಯ 48 ರ ಕುಂದುವಾಡ ಕ್ರಾಸ್ ಬಳಿ ನಡೆದಿದೆ.
ಮೃತಪಟ್ಟ ದುರ್ದೈವಿಗಳನ್ನು ಶಿವಮೊಗ್ಗ ಟಿಪ್ಪುನಗರದ ಮಹಮ್ಮದ್ ಜಬೀವುಲ್ಲಾ(45) ಅವರ ಪತ್ನಿ ಹಮೀದಾ(43) ಹಾಗು ಅವರ ಮೊಮ್ಮಗಳು ಗೌಸಿಯಾ ಬಾನು(4) ಎಂದು ಗುರುತಿಸಲಾಗಿದೆ.


ಈದುಲ್ ಫಿತ್ರ್ ಹಬ್ಬಕ್ಕೆ ದಾವಣಗೆರೆ ನಿಟ್ಟುವಳ್ಳಿಯಲ್ಲಿರುವ ತನ್ನ ಮಗಳ ಮನೆಗೆ ಮೊಮ್ಮಗಳನ್ನು ಕರೆದುಕೊಂಡು ಹೋಗುವಾಗ ಈ ಘಟನೆ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಆಯ ತಪ್ಪಿದ ಬೈಕ್ ಪಕ್ಕದಲ್ಲಿ ಸಂಚರಿಸುತ್ತಿದ್ದ ಲಾರಿಯ ಚಕ್ರದಡಿಗೆ ಬಿದ್ದು ಬೈಕ್ ನಲ್ಲಿದ್ದ ಒಂದೇ ಕುಟುಂಬದ ಮೂವರು ಅಸು ನೀಗಿದ್ದಾರೆ.
ಭೀಕರ ದುರ್ಘಟನೆಯಲ್ಲಿ ಹಮೀದಾ ಹಾಗೂ ಮೊಮ್ಮಗಳು ಗೌಸಿಯಾಬಾನು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೊಹಮ್ಮದ್ ಜಬೀವುಲ್ಲಾ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ದಾವಣಗೆರೆ ದಕ್ಷಿಣ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕುಟುಂಬದ ರೋಧನೆ ಮುಗಿಲು ಮುಟ್ಟಿದ್ದು, ಊರಿಡೀ ಶೋಕಾಚಾರಣೆಯಲ್ಲಿ ಮುಳುಗಿದೆ.