ಬೆಂಗಳೂರು: ಧ್ವನಿವರ್ಧಕ ಬಳಕೆಯಲ್ಲಿ ನಿಯಮ ಉಲ್ಲಂಘನೆಯಾದರೆ, ಡಿವೈಎಸ್‌ಪಿ ದರ್ಜೆಯಿಂದ ಮೇಲ್ಪಟ್ಟು ರಾಜ್ಯ ಪೊಲೀಸ್ ಮಹಾನಿರ್ದೇಶಕರ ದರ್ಜೆವರೆಗೂ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಕ್ರಮ ಕೈಗೊಳ್ಳುವ ಅಧಿಕಾರ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈಗಾಗಲೇ ಧ್ವನಿವರ್ಧಕಗಳ ಬಳಕೆಗೆ 15 ದಿನಗಳ ಒಳಗಾಗಿ ಕಡ್ಡಾಯವಾಗಿ ಅನುಮತಿ ಪಡೆಯುವಂತೆ ಸೂಚಿಸಿದೆ. ಎಲ್ಲ ಧಾರ್ಮಿಕ ಕೇಂದ್ರಗಳು ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಲ್ಲೂ ಧ್ವನಿವರ್ಧಕ ಬಳಸುವುದಕ್ಕೂ ಅನುಮತಿ ಕಡ್ಡಾಯಗೊಳಿಸಿದೆ. ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಹಾಗೂ ಬೆಳಗ್ಗೆ 6 ರಿಂದ ರಾತ್ರಿ 10ರ ವರೆಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿರುವ ಮಿತಿಯಲ್ಲೇ ಮೈಕ್‌ಗಳ ಶಬ್ಧ ಪ್ರಮಾಣ ಇರಬೇಕು. ವಸತಿ ಪ್ರದೇಶಗಳಲ್ಲಿ ರಾತ್ರಿ 10ರ ಬಳಿಕ ವಾಹನಗಳ ಹಾರ್ನ್ ಗಳಿಗೂ ನಿರ್ಬಂಧವಿರಬೇಕು ಎಂದು ಆದೇಶಿಸಿದೆ.
ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಗಳ ಬಳಕೆಗೆ ಲಿಖಿತ ಅನುಮತಿ ಪಡೆದಿರಬೇಕು ಈ ಮಾರ್ಗಸೂಚಿ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸೂಚಿಸಿದೆ.
ಅನುಮತಿ ನೀಡಲು 2 ಹಂತದ ಸಮಿತಿ: ಧ್ವನಿವರ್ಧಕಗಳಿಗೆ ಅನುಮತಿ ಕೊಡಲು 2 ಹಂತದಲ್ಲಿ ಸರ್ಕಾರ ಸಮಿತಿ ರಚನೆ ಮಾಡಲಿದೆ. ಕಮಿಷನರೇಟ್ ಜಿಲ್ಲೆಗಳಲ್ಲಿ ಮೊದಲ ಸಮಿತಿ ರಚಿಸಬೇಕು. ಈ ಸಮಿತಿಯಲ್ಲಿ ಎಸಿಪಿ, ಸ್ಥಳೀಯ ಸಂಸ್ಥೆಯ ಕಾರ್ಯಕಾರಿ ಇಂಜಿನಿಯರ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಒಬ್ಬರು ಸದಸ್ಯರಿರುತ್ತಾರೆ. ಉಳಿದ ಜಿಲ್ಲೆಗಳಲ್ಲಿ 2ನೇ ಸಮಿತಿ ರಚಿಸಬೇಕು. ಇದರಲ್ಲಿ ಡಿವೈಎಸ್ಪಿ, ತಹಸಿಲ್ದಾರ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಒಬ್ಬರು ಸದಸ್ಯರಿರುತ್ತಾರೆ. ಎಲ್ಲ ಪರಿಶೀಲಿಸಿ ಈ ಸಮಿತಿಗಳು ಧ್ವನಿವರ್ಧಕಗಳಿಗೆ ಅನುಮತಿ ಕೊಡಲಿವೆ.
ಸಾರ್ವಜನಿಕ ಸ್ಥಳಗಳಲ್ಲಿ 10 ರಿಂದ 75 ಡೆಸಿಬಲ್, ಖಾಸಗಿ ಸ್ಥಳಗಳಲ್ಲಿ ಸ್ವಂತ ಸೌಂಡ್ ಸಿಸ್ಟಂಗಳ ಬಳಕೆಗೆ 5 ಡಿಸಿಬಲ್ ಶಬ್ಧ ಮಿತಿ ಇರಬೇಕು. ಹೊರತಾಗಿ ರಾತ್ರಿ 10ರ ಬಳಿಕ ಡ್ರಂ, ಟ್ರಂಪೆಟ್, ಟಂ-ಟಂ, ಇತರೆ ಶಬ್ಧ ಉಂಟು ಮಾಡುವ ಸಾಧನಗಳ ಬಳಕೆಯನ್ನೂ ನಿಷೇಧಿಸಲಾಗಿದೆ ಎಂದು ಆದೇಶ ಪ್ರತಿ ಹೇಳಿದೆ.
ಸದ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ಅನುಮತಿ ಕೊಡಲು 2 ಹಂತದ ಸಮಿತಿಗಳ ರಚನೆ ಹೊರತುಪಡಿಸಿದರೆ ಹೊಸ ಟಫ್ ರೂಲ್ಸ್‌ಗಳು ಇಲ್ಲ. ಉಳಿದಂತೆ 2005ರ ಸುಪ್ರೀಂ ಕೋರ್ಟ್ ಆದೇಶ, 1986ರ ಪರಿಸರ ಸಂರಕ್ಷಣೆ ಕಾಯ್ದೆ ಹಾಗೂ 2002 ರ ಕರ್ನಾಟಕ ಸರ್ಕಾರದ ಆದೇಶಗಳ ಪಾಲನೆಗೆ ತಾಕೀತು ಮಾಡಿದೆ.
ಧ್ವನಿ ವರ್ಧಕ ಬಳಕೆಗೆ ಸಂಬಂಧಿಸಿ ಸುಪ್ರಿಂ ಕೋರ್ಟ್ ಆದೇಶ ಶೇಕಡಾ ನೂರರಷ್ಟು ಜಾರಿಗೊಳಿಸಿದರೆ ಆಝಾನ್ ಗೆ ಮಾತ್ರ ಅಲ್ಲ, ಮದುವೆ, ಮೆಹಂದಿ, ಜಾತ್ರೆ, ಉರೂಸು, ಶೋಭಾಯಾತ್ರೆ, ಕ್ರೀಡಾಕೂಟ, ವಾರ್ಷಿಕೋತ್ಸವ, ನಾಟಕ, ಯಕ್ಷಗಾನ ಎಲ್ಲದ್ದಕ್ಕೂ ಅನ್ವಯ ಆಗುತ್ತದೆ.