ಮಂಗಳೂರು: ರಾಜ್ಯಮಟ್ಟದಲ್ಲಿ ಚರ್ಚೆಗೆ ಒಳಪಟ್ಟಿರುವ ಮಳಲಿ ವಿವಾದಿತ ಮಸೀದಿ ವಿಚಾರವಾಗಿ ಸ್ಥಳೀಯ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ಮಸೀದಿ ಆಡಳಿತ ಮಂಡಳಿ, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ಊರಿನ ಪ್ರಮುಖರು, ವಿ.ಎಚ್.ಪಿ ಪ್ರಮುಖರ ಜೊತೆ ನಿನ್ನೆ ಮಂಗಳೂರು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸೌಹಾರ್ದತೆಯೊಂದಿಗೆ ಮುಗಿಸುವ ಸಲುವಾಗಿ ಸಭೆ ನಡೆಯಿತು.
ಪ್ರಾರಂಭದಲ್ಲಿ ಮಸೀದಿ ಆಡಳಿತ ಮಂಡಳಿ ಜೊತೆ ಸಭೆ ನಡೆಸಿದ ಶಾಸಕ ಭರತ್ ಶೆಟ್ಟಿ ಬಳಿಕ ಹಿಂದೂ ಸಂಘಟನೆ ಪ್ರಮುಖರ ಜೊತೆ ಸಭೆ ನಡೆಸಿದ್ದಾರೆ.
ಮೂರನೇ ಹಂತದಲ್ಲಿ ಮಸೀದಿ ಆಡಳಿತ ಮಂಡಳಿ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ಊರಿನ ಪ್ರಮುಖರು, ವಿ.ಎಚ್.ಪಿ ಬಜರಂಗದಳ ಪ್ರಮುಖರ ಜೊತೆ ಜಂಟಿ ಸಭೆ ನಡೆಸಿದ್ದಾರೆ.
ಒಂದು ಘಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಎಲ್ಲರೂ ತಮ್ಮ ತಮ್ಮ ನಿಲುವು ವ್ಯಕ್ತಪಡಿಸಿದ್ದು ಸೌಹಾರ್ದಯುತವಾಗಿ ವಿವಾದ ಬಗೆಹರಿಸುವ ಬಗ್ಗೆ ನಡೆದ ಮಾತುಕತೆ ನಡೆದಿದೆ.
ಸಭೆಯ ನಂತರ ಮಾತನಾಡಿದ ಶಾಸಕ ಸದ್ಯ ಮಳಲಿಯ ವಿವಾದಿತ ಪ್ರದೇಶ ನಿರ್ಬಂಧಿತ ವಲಯ ಎಂದು ನ್ಯಾಯಾಲಯ ಗುರುತಿಸಿದೆ. ಅಲ್ಲಿ ಯಾರಿಗೂ ಪ್ರವೇಶವಿಲ್ಲ. ಅಷ್ಟಮಂಗಲ ಇಡುವುದು ಸ್ಥಳೀಯರ ನಂಬಿಕೆ ವಿಷಯ.ಅವರು ಎಲ್ಲಿ ಯಾವಾಗ ಇಡುತ್ತಾರೆ ಎನ್ನವುದು ಖಾಸಗಿ ವಿಚಾರವಾಗಿದ್ದು ಒಟ್ಟಿನಲ್ಲಿ ಸೌಹಾರ್ದಯುತವಾಗಿ ಈ ವಿಷಯ ಅಂತ್ಯವಾಗಲಿ ಎನ್ನುವ ಕಾರಣಕ್ಕೆ ಸರ್ವ ಪ್ರಯತ್ನ ನಡೆಸಲಾಗುತ್ತದೆ ಎಂದರು.
ಸಭೆಯಲ್ಲಿ ಮಳಲಿಯ ಅಸಯ್ಯದ್ ಅಬ್ದುಲ್ಲಾಹಿಲ್ ಮದನಿ ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಮೊಹಮ್ಮದ್ ಮಾಮು, ಕಾರ್ಯದರ್ಶಿ ಸರ್ಫರಾಜ್, ಪದಾಧಿಕಾರಿಗಳಾದ ಮುಸ್ತಾಫಾ, ರಝಾಕ್ ಇಟ್ಬಾಲ್, ಮಯ್ಯದಿ ಹಾಗೂ ಹಿಂದೂ ಸಂಘಟನೆಯ ಪ್ರಮುಖರಾದ ಶರಣ್ ಪಂಪ್‌ವೆಲ್, ಶಿವಾನಂದ ಮೆಂಡನ್, ಭುಜಂಗ ಕುಲಾಲ್ ಉಪಸ್ಥಿತರಿದ್ದರು.