ಹುಬ್ಬಳ್ಳಿ: ರಾಜ್ಯದಲ್ಲಿ ನಡೆಯುತ್ತಿರುವ ಶಬ್ದ ಮಾಲಿನ್ಯ ವಿಚಾರದಲ್ಲಿ ಬಿಜೆಪಿಗೆ ಸರಕಾರ ನಡೆಸುವುದಕ್ಕೆ ಆಗದೇ ಇದ್ರೆ ಕೆಳಗಿಳಿಯಿರಿ, ನನ್ನ ಕೈಗೆ ಅಧಿಕಾರ ಕೊಟ್ಟು ನೋಡ್ಲಿ 24 ಗಂಟೆಯೊಳಗೆ ಸುಪ್ರೀಂ ಕೋರ್ಟ್ ಆಜ್ಞೆ ಪಾಲಿಸದಿದ್ದವರನ್ನು ಗುಂಡು ಹೊಡೆದು ಮುಗಿಸ್ತೇನೆ ಎಂದು ಶ್ರೀರಾಮ ಸೇನೆ ಸ್ಥಾಪಕಾಧ್ಯಕ್ಷ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಹುಬ್ಬಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಬ್ದ ಮಾಲಿನ್ಯದ ಬಗ್ಗೆ ಸಿಎಂ 15 ದಿನದ ಗಡುವು ಕೊಟ್ಟು ಆದೇಶ ಹೊರಡಿಸಿದ್ದರು.
ಇದೀಗ 15 ದಿನ ಕಳೆದರೂ ಪಾಲನೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎರಡನೇ ಹಂತದ ಹೋರಾಟಕ್ಕೆ ನಾವು ಸಿದ್ದವಾಗಿದ್ದೇವೆ.
ಜೂ.8ರಂದು ರಾಜ್ಯದ ಎಲ್ಲಾ ಎಂಎಲ್‌ಎ, ಮಂತ್ರಿ ಮನೆ ಎದುರು ಧರಣಿ ನಡೆಸುತ್ತೇವೆ. ಅವರ್ರನ್ನ ಬಟಾಬಯಲು ಮಾಡ್ತೇವೆ, ನೀವೇನೂ ಮಾಡ್ತಾ ಇಲ್ಲ ಅನ್ನೋದನ್ನು ಜನಜಾಗೃತಿ ಮಾಡುತ್ತೇವೆ.
ಇದೇ ವೇಳೆ ಸಿಎಂ ಬೊಮ್ಮಾಯಿ ಅವರನ್ನುದ್ದೇಶಿಸಿ, ನೀವು ಯೋಗಿಯ 25 ಪರ್ಸೆಂಟ್ ಆದ್ರೂ ಗಟ್ಸ್ ತೋರಿಸ್ಬೇಕು. ನಿಮ್ಮತ್ರ ಆ ತಾಕತ್ತು, ಧಂ ಇಲ್ಲ. ಗಟ್ಟಿಯಾಗದೇ ಇದ್ರೆ ಮುಂದಿನ ಚುನಾವಣೆಯಲ್ಲಿ ಕಷ್ಟ ಇದೆ ಎಂದರು.
ಬಿಜೆಪಿ ಬಗ್ಗೆ ವಾಗ್ದಾಳಿ ನಡೆಸಿ, ನಮ್ಮ ಹೋರಾಟ, ತ್ಯಾಗ ಬಲಿದಾನದಿಂದ ಬಿಜೆಪಿಯವ್ರು ಸರ್ಕಾರ ನಡೆಸುತ್ತಿದ್ದಾರೆ. ಬಿಜೆಪಿ ಇವರಪ್ಪಂದು ಅಲ್ರೀ. ನಾವೂ ರಕ್ತ, ಬೆವರು ಹರಿಸಿದ್ದೇವೆ.
ಈ ಹಿಂದೆ ಟಿಕೆಟ್‌ಗಾಗಿ ಅವರತ್ರ ಭಿಕ್ಷೆ ಬೇಡಿಲ್ಲ. ನಮ್ಮ ಹಕ್ಕಿದೆ. ಅದನ್ನು ಕೇಳಿದ್ದೇವೆ ಎಂದು ಪ್ರಕಟಣೆಯಲ್ಲಿ ಮಾತಾಡುತ್ತಾ ಹೇಳಿದರು.