ಉಪ್ಪಿನಂಗಡಿ: ಬೇಸಿಗೆ ರಜೆಯ ನಿಮಿತ್ತ ತಣ್ಣಗಿದ್ದ ಹಿಜಾಬ್ ವಿಚಾರ ಇದೀಗ ಮತ್ತೆ ಭುಗಿಲೆದ್ದಿದೆ.
ಉಪ್ಪಿನಂಗಡಿಯ ಸರಕಾರಿ ಪದವಿ ಕಾಲೇಜಿನ ಕ್ಯಾಂಪಸ್ ಒಳಗಡೆ ಅತಿಕ್ರಮ ಪ್ರವೇಶಿಸಿ ಹಿಜಾಬ್’ಧಾರಣಿ ವಿದ್ಯಾರ್ಥಿನಿಯರ ವೀಡಿಯೋ ತೆಗೆದು, ತಡೆಯಲು ಬಂದ ವಿದ್ಯಾರ್ಥಿನಿಯರ ಶಾಲು ಎಳೆದ ಆರೋಪದಲ್ಲಿ ಮೂವರು ಪತ್ರಕರ್ತರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯೂಸ್ 18 ವರದಿಗಾರ ಅಜಿತ್ ಕುಮಾರ್, ಪತ್ರಕರ್ತರಾದ ಪ್ರವೀಣ್ ಕುಮಾರ್ ಹಾಗೂ ಸಿದ್ದೀಕ್ ನೀರಾಜೆ ಎಂಬವರ ವಿರುದ್ಧ FIR ದಾಖಲಾಗಿದೆ.
ಜೂನ್ 2 ರಂದು 9.30 ರ ಸುಮಾರಿಗೆ ಸಂತ್ರಸ್ತ ವಿದ್ಯಾರ್ಥಿನಿ ಕಾಲೇಜಿಗೆ ಬಂದಾಗ ಅಪರಿಚಿತ ಮೂವರು ವ್ಯಕ್ತಿಗಳು ಕಾಲೇಜಿಗೆ ಅತಿಕ್ರಮ ಪ್ರವೇಶಿಸಿದ್ದನ್ನು ನೋಡಿದ್ದಾಳೆ. ಈ ವೇಳೆ ಅಜಿತ್ ಕುಮಾರ್ ಎಂಬಾತ ವಿದ್ಯಾರ್ಥಿನಿಯ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಎನ್ನಲಾಗಿದೆ. ವೀಡಿಯೋ ಮಾಡಲು ವಿರೋಧ ವ್ಯಕ್ತಪಡಿಸಿದಾಗ, ವಿದ್ಯಾರ್ಥಿನಿಯ ಶಾಲನ್ನು ಎಳೆಯಲು ಆತ ಪ್ರಯತ್ನಿಸಿದ್ದು ಆಕೆ ತಪ್ಪಿಸಿಕೊಂಡಾಗ ಪ್ರವೀಣ್ ಕುಮಾರ್ ಎಂಬಾತ ಪ್ರಚೋದನೆ ನೀಡಿದ್ದಾನೆ. ಅಲ್ಲದೇ, ನೀವು ಯಾರು? ಎಂದು ಪ್ರಶ್ನಿಸಿದ ವಿದ್ಯಾರ್ಥಿನಿಗೆ ಉತ್ತರ ಕೊಡದೆ “ನಾಳೆಯಿಂದ ನೀವು ಹೇಗೆ ಕಾಲೇಜಿಗೆ ಬರುತ್ತೇವೆ ಎಂದು ನೋಡುತ್ತೇವೆ’ ನಿನ್ನ ವೀಡಿಯೋ ವೈರಲ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಳಿಕ ವಿದ್ಯಾರ್ಥಿನಿ ಪ್ರಾಂಶುಪಾಲರಿಗೆ ಈ ಬಗ್ಗೆ ಮೌಖಿಕ ದೂರು ನೀಡಿದ್ದು ಪ್ರಾಂಶುಪಾಲರು ಮೂವರನ್ನು ಕರೆದು ಅವರು ತೆಗೆದ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ. ಆ ಬಳಿಕ ಅವರೆಲ್ಲರೂ ಪತ್ರಕರ್ತರು ಎಂಬುದು ತಿಳಿಯಿತು ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾಳೆ .
ಅಕ್ರಮವಾಗಿ ಕಾಲೇಜು ಆವರಣದೊಳಗೆ ಪ್ರವೇಶಿಸಿ, ಹಿಂದೂ-ಮುಸ್ಲಿಂ ಭೇದ ಭಾವ ಮಾಡಿ ಧರ್ಮನಿಂದನೆ ಮಾಡಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿನಿಯರು ಮನವಿ ಮಾಡಿಕೊಂಡಿದ್ದಾರೆ.
ಪೊಲೀಸರು ಐಪಿಸಿ 447, 354, 504, 606,34 ಸೆಕ್ಷನ್ ಅಡಿಯಲ್ಲಿ ಎಫ್ ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹಿಜಾಬ್- ಕೇಸರಿ ವಿವಾದ, ಪತ್ರಕರ್ತರ ಮೇಲೆ ಹಲ್ಲೆ, ಪತ್ರಕರ್ತರ ಅತಿಕ್ರಮ ಪ್ರವೇಶ ಆರೋಪ ನಿನ್ನೆಯಿಂದ ಕೇಳಿಬರುತ್ತಿವೆ. ಇಂದು ಬೆಳಗ್ಗೆ ಪತ್ರಕರ್ತರು ಕಾಲೇಜಿನಲ್ಲಿ ನಮ್ಮಮೇಲೆ ಹಲ್ಲೆ ನಡೆದಿದೆ ಎಂದು ಪೊಲೀಸರಿಗೆ ಮತ್ತು ಡಿಸಿಗೆ ದೂರು ನೀಡಿದ್ದರು.