ಬಂಟ್ವಾಳ: ದ.ಕ ಜಿಲ್ಲೆಯಲ್ಲಿ ಸಂಘ ಪರಿವಾರದ ನೈತಿಕ ಪೊಲೀಸ್ ಗಿರಿ ಮತ್ತಷ್ಟು ಹೆಚ್ಚಾಗುತ್ತಿದ್ದು ಒಂದು ಸಮುದಾಯವನ್ನು ಗುರಿ ಪಡಿಸಿ ವಿನಾ ಕಾರಣ ಹಲ್ಲೆಗಳು ಹೆಚ್ಚುತ್ತಲೇ ಇವೆಯೆಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೈತಿಕ ಪೊಲೀಸ್ ಗಿರಿಗೆ ಮತ್ತಷ್ಟು ಪುಷ್ಟಿ ನೀಡುವಂತೆ ನಿನ್ನೆ ಮೂಡಬಿದ್ರೆ ರಾಯಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವರಿಗೆ ಸಂಘ ಪರಿವಾರದ ಕಾರ್ಯಕರ್ತರು ಸಹಿತ ಬಸ್ಸು ನಿರ್ವಾಹಕ ಮನಬಂದಂತೆ ತಳಿಸಿದ ಅವಮಾನಿಯ ಘಟನೆ ಮೂಡಬಿದ್ರೆಯ ರಾಯಿ ಎಂಬಲ್ಲಿ ನಿನ್ನೆ ಸಂಭವಿಸಿದೆ.
ಘಟನೆಯಲ್ಲಿ ಹಲ್ಲೆಗೊಳಗಾದ ವ್ಯಕ್ತಿಯನ್ನು ಮೂಲರಪಟ್ನ ನಿವಾಸಿ ಇಸಾಕ್(45) ಎಂದು ಗುರುತಿಸಲಾಗಿದೆ.
ಬುಧವಾರ ಬೆಳಿಗ್ಗೆ ಇಸಾಕ್ ರವರು ಬಿ.ಸಿ ರೋಡ್ ನಿಂದ ಮೂಡಬಿದ್ರೆಗೆ ಹೋಗಲು “ಮಹಾ ಗಣೇಶ” ಬಸ್ಸು ಹತ್ತಿದ್ದು ಬಸ್ಸಿನಲ್ಲಿ ಕಿಕ್ಕಿರಿದ ಜನ ಇದ್ದಿದ್ದರಿಂದ ಸೀಟಿನಲ್ಲಿ ಕೂತ ಇಸಾಕ್ ರವರ ಕೈಯಲ್ಲಿ ಬಸ್ಸಿನಲ್ಲಿ ನಿಂತಿದ್ದ ಮಹಿಳೆಯೊಬ್ಬರು ಬ್ಯಾಗ್ ನೀಡಿದ್ದು
ಮಾನವೀಯತೆ ನಿಟ್ಟಿನಲ್ಲಿ ಅವರು ಬ್ಯಾಗ್ ಪಡೆದುಕೊಂಡಿದ್ದು ನಂತರ ಆ ಮಹಿಳೆ ತಾನು ಇಳಿಯುವ ಜಾಗ ಬಂದಾಗ ಬ್ಯಾಗ್ ಪಡೆದು ಇಳಿದು ತೆರಳಿದ್ದು.
ಇದಾದ ಸ್ವಲ್ಪ ಹೊತ್ತಿನಲ್ಲಿ ಬಸ್ಸು ನಿರ್ವಾಹಕ ಇಸಾಕ್ ರವರ ಬಳಿ ಬಂದು ನೀನು ಆ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ್ದಿಯಾ ಎಂದು ಸುಳ್ಳು ಆರೋಪ ಮಾಡಿ ಇಸಾಕ್ ರವರಿಗೆ ಹಲ್ಲೆ ನಡೆಸಿದ್ದು ಬಸ್ಸು ನಿಲ್ಲಿಸಿ ಆತ ಯಾರಿಗೋ ಕರೆ ಮಾಡಿ ಒಂದಷ್ಟು ಯುವಕರನ್ನು ಕರೆಸಿ ಅವರಿಗೆ ಇಸಾಕ್ ರವರನ್ನು ಹಸ್ತಾಂತರಿಸಿ ಆತ ಬಸ್ ನೊಂದಿಗೆ ಹೊರಟಿದ್ದಾನೆ ಎಂದು ತಿಳಿದು ಬಂದಿದೆ.
ಸಂಘ ಪರಿವಾರದ ಯುವಕರ ತಂಡ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಇಸಾಕ್ ರವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಕೈ,ಕಾಲು ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಹಲ್ಲೆಯ ತೀವೃತೆಗೆ ಇಸಾಕ್ ರವರಿಗೆ ಗಂಭೀರ ಗಾಯಗಳಾಗಿದ್ದು ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಹೊಡೆದ ಬಳಿಕ ಪೊಲೀಸರಿಗೆ ಇದೇ ದುಷ್ಕರ್ಮಿಗಳು ಕರೆ ಮಾಡಿ ತಿಳಿಸಿದ್ದು ಪೊಲೀಸರು ಆಗಮಿಸುವ ವೇಳೆ ಇಸಾಕ್ ರವರ ಕೈ ಕಾಲಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಲಾಗಿತ್ತು ಎನ್ನಲಾಗಿದೆ.
ಪೊಲೀಸರು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಇಸಾಕ್ ರವರನ್ನು ದಾಖಲಿಸಿದ್ದು ಅಲ್ಲಿ ಬೆನ್ನ ಹಿಂದಿನ ಗಾಯಗಳನ್ನು ತೋರಿಸದಂತೆ ಪೊಲೀಸರು ಇಸಾಕ್ ರವರಿಗೆ ಒತ್ತಡ ಹಾಕಿದ್ದರು ಎನ್ನಲಾಗಿದೆ.
ಬೆನ್ನಿನಲ್ಲಿ ರಕ್ತ ಹೆಪ್ಪುಗಟ್ಟಿ ತೀವೃ ಗಾಯಗಳಾಗಿತ್ತು.
ಪೊಲೀಸರು ಕೂಡ ಸಂತ್ರಸ್ತನ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದು ಸ್ವಯಂ ಪ್ರೇರಿತ ಕೇಸು ದಾಖಲಿಸಲು ನಾವು ಒತ್ತಾಯಿಸಿದ್ದರು ಅವರು ನಮಗೆ ಮುಕ್ತ ಸ್ವಾತಂತ್ರ್ಯವಿಲ್ಲ ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ ಎಂದು ಇಸಾಕ್ ರವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಸಂತ್ರಸ್ತನ ಪಾಲಿಗೆ ನ್ಯಾಯ ಯಾವ ರೀತಿ ಸಿಗುತ್ತದೋ ಕಾದು ನೋಡಬೇಕಿದೆ.!