ಮಧ್ಯಪ್ರದೇಶ; ನಗರದ ಪ್ರಮುಖ ರಸ್ತೆಯಲ್ಲಿ ಓಡಾಡುತ್ತಿದ್ದ ಬೀದಿ ನಾಯಿಗಳನ್ನು ಆ್ಯಸಿಡ್ ದಾಳಿ ನಡೆಸಿ ದುಷ್ಕರ್ಮಿಗಳು ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಉಜ್ಜೈನಿಯಲ್ಲಿ ನಡೆದಿದೆ.
ಈ ಬಗ್ಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದ್ದಂತೆ ಇದೀಗ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಉಜ್ಜೈನಿಯ ನಾಗಜಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ಬೀದಿ ನಾಯಿಗಳ ಬಾಯಿಗೆ ಕೆಲವು ಅಪರಿಚಿತ ವ್ಯಕ್ತಿಗಳು ಆ್ಯಸಿಡ್ ಹಾಕಿದ್ದಾರೆ ಎಂದು ಕರೆ ಮಾಡಿದ್ದರು. ಇದನ್ನು ಕೇಳಿ ಸ್ಥಳಕ್ಕೆ ಧಾವಿಸಿದಾಗ ಘಟನೆ ನಡೆದಿರುವುದು ಬೆಳಕಿಗೆ ಬಂತು ಎಂದು ಪೀಪಲ್ ಫಾರ್ ಅನಿಮಲ್ಸ್ ಇಂದೋರ್ ಘಟಕದ ಅಧ್ಯಕ್ಷ ಪ್ರಿಯಾಂಶು ಜೈನ್ ತಿಳಿಸಿದ್ದಾರೆ.
ಆ ಬಳಿಕ ಸಂಸ್ಥೆಯ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ನಾಲ್ಕರಿಂದ ಎಂಟು ವರ್ಷ ಪ್ರಾಯದ ನಾಯಿಗಳ ಮೇಲೆ ಆ್ಯಸಿಡ್ ದಾಳಿ ನಡೆಸಲಾಗಿದ್ದು, ಕೆಲ ನಾಯಿಗಳ ಬಾಯಿಗೆ ಆ್ಯಸಿಡ್ ಹಾಕಿದ್ದರಿಂದ ಸಂಪೂರ್ಣ ಸುಟ್ಟುಹೋಗಿದೆ. ಹೀಗೆ ಜೀವನ್ಮರಣದ ನಡುವೆ ಹೊರಳಾಡುತ್ತಿದ್ದ ನಾಯಿಗಳನ್ನು ಸ್ಥಳೀಯರು ಪಶು ಆಸ್ಪ್ರತೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.ಇನ್ನು ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದವು.
ಇದರ ಬೆನ್ನಲ್ಲೇ ಪ್ರಕರಣ ದಾಖಲಿಸಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಸುತ್ತ ಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವುದಾಗಿ ನಾಗಜಿರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಲಿವಾನ್ ಕುಜೂರ್ ತಿಳಿಸಿದ್ದಾರೆ. ಅಲ್ಲದೆ ಖಂಡಿತವಾಗಿಯೂ ಆರೋಪಿಯನ್ನು ಬಂಧಿಸುವುದಾಗಿ ಪೊಲೀಸರು ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆಗೆ ಭರವಸೆ ನೀಡಿದ್ದಾರೆ.