dtvkannada

ವಿಶ್ವದಲ್ಲಿ ಕೋಟ್ಯಾಂತರ ಮಂದಿ ಬಳಕೆದಾರರನ್ನು ಹೊಂದಿರುವ ಪ್ರಸಿದ್ಧ ಮೆಸೇಜಿಂಗ್ ಅಪ್ಲೆಕೇಶನ್ ವಾಟ್ಸ್ಆ್ಯಪ್ ಇದೀಗ ತನ್ನ ಗೌಪ್ಯತೆ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದೆ. ವಾಟ್ಸ್ಆ್ಯಪ್ ಯಾವುದೇ ಕಾರಣಕ್ಕೂ ಬಳಕೆದಾರರ ಖಾಸಗಿ ಸಂದೇಶಗಳನ್ನು ಓದಲು ಸಾಧ್ಯವೇ ಇಲ್ಲ ಎಂದು ಸಾರಿ ಸಾರಿ ಹೇಳುತ್ತಿದೆ. ಹೀಗಿರುವಾಗ ಪ್ರೋ ಪಬ್ಲಿಕಾ, ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ (End-to-End Encryption) ಎಂದು ವಾಟ್ಸ್ಆ್ಯಪ್ ಹೇಳಿದ್ದರೂ ಸಹ ಫೇಸ್ ಬುಕ್ ಕಂಪನಿಯೂ 1000ಕ್ಕೂ ಅಧಿಕ ಗುತ್ತಿಗೆ ಕೆಲಸಗಾರರಿಗೆ ವಾಟ್ಸ್ಆ್ಯಪ್ನಲ್ಲಿ ಬಳಕೆದಾರರು ಮಾಡುವ ಖಾಸಗಿ ಸಂದೇಶಗಳನ್ನು ಓದಲೆಂದೇ ನೇಮಿಸಿದೆ ಎಂಬ ಶಾಕಿಂಗ್ ಸುದ್ದಿ ಪ್ರಕಟಿಸಿದೆ.

ಸಾಮಾನ್ಯವಾಗಿ ಹೊಸ ಬಳಕೆದಾರರು ವಾಟ್ಸ್ಆ್ಯಪ್ ಖಾತೆ ತೆರೆಯುತ್ತಿದ್ದಂತೆ ನಿಮ್ಮ ಸಂದೇಶಗಳು ಹಾಗೂ ಕರೆಗಳು ಸುರಕ್ಷಿತವಾಗಿದೆ. ನೀವು ಸಂಭಾಷಣೆ ನಡೆಸುವ ವ್ಯಕ್ತಿಯ ಹಾಗೂ ನಿಮ್ಮ ನಡುವೆ ವಿಲೇವಾರಿ ಆಗುವ ವಿಚಾರಗಳನ್ನು ಯಾರೂ ಓದುವುದಿಲ್ಲ, ಕೇಳುವುದೂ ಇಲ್ಲ , ನಿಮ್ಮ ಮಧ್ಯೆ ಇಲ್ಲಿ ಇನ್ಯಾರೂ ಇರುವುದಿಲ್ಲ ಎಂದು ಗೌಪ್ಯತೆಯ ಬಗ್ಗೆ ದೃಢೀಕರಣ ನೀಡಲಾಗುತ್ತದೆ. ಆದರೆ ಈ ಎಲ್ಲಾ ದೃಢೀಕರಣವು ಸುಳ್ಳು ಎಂದು ಪ್ರೋ ಪಬ್ಲಿಕಾ ವರದಿ ಮಾಡಿದೆ.

“ಆಸ್ಟಿನ್, ಟೆಕ್ಸಾಸ್, ಡುಬ್ಲಿನ್ ಹಾಗೂ ಸಿಂಗಾಪುರದಲ್ಲಿ ಬಳಕೆದಾರರ ಖಾಸಗಿ ಮೆಸೇಜ್ಗಳನ್ನು ಓದುವವರಿಗಾಗಿಯೇ ಕಚೇರಿ ಸ್ಥಾಪನೆ ಮಾಡಲಾಗಿದೆ. ಈ ಕೆಲಸಕ್ಕಾಗಿ ವಾಟ್ಸ್ ಆಪ್ ಸಾವಿರಕ್ಕೂ ಹೆಚ್ಚು ಜನರನ್ನು ಕಾಂಟ್ರಾಕ್ಟ್ ಮೇಲೆ ನೇಮಿಸಿದ್ದು, ಅಲ್ಲಿಂದ ಈ ಜನರು ಲಕ್ಷಾಂತರ ಜನರ ಕಂಟೆಂಟ್ ಅನ್ನು ಪರಿಶೀಲಿಸುತ್ತಾರೆ. ಈ ಜನರು ಫೇಸ್ಬುಕ್ ಸಾಫ್ಟ್ವೇರ್ ಬಳಸಿ ಬಳಕೆದಾರರ ಖಾಸಗಿ ಸಂದೇಶಗಳು, ಭಾವಚಿತ್ರಗಳು ಹಾಗೂ ವಿಡಿಯೋಗಳನ್ನು ನೋಡಬಹುದು. ಇದಕ್ಕಾಗಿ ಕಂಪನಿ ಅವರಿಗೆ ವೇತನ ಕೂಡ ಪಾವತಿಸುತ್ತದೆ” ಎಂದು ಹೇಳಿದೆ.

ಇಷ್ಟು ಮಾತ್ರವಲ್ಲದೇ ಈ ಕಂಪನಿಯು ಬಳಕೆದಾರರ ಕೆಲ ಖಾಸಗಿ ಮಾಹಿತಿಗಳನ್ನು ಅಮೆರಿಕದ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ನಂತಹ ಸಾಕಷ್ಟು ಕಾನೂನು ಜಾರಿ ಸಂಸ್ಥೆಯೊಂದಿಗೆ ಹಂಚಿಕೊಂಡಿದೆ ಎನ್ನಲಾಗಿದೆ. ವಾಟ್ಸ್ಆ್ಯಪ್ನಲ್ಲಿ ಬಳಕೆದಾರರ ಖಾಸಗಿ ಸಂಭಾಷಣೆಯ ಮೇಲೆ ಕಣ್ಣಿಡಲು ಸಾಧ್ಯವಿಲ್ಲ ಎಂದು ಫೇಸ್ಬುಕ್ ಸ್ಥಾಪಕ ಜುಕರ್ ಬರ್ಗ್ ಹೇಳಿಕೆ ನೀಡಿದ್ದರು. ಆದರೆ ಇದೀಗ ಪ್ರೋ ಪಬ್ಲಿಕಾ ಈ ರೀತಿಯ ಸ್ಪೋಟಕ ಮಾಹಿತಿ ಪ್ರಕಟ ಮಾಡಿದೆ.

ಇನ್ನೂ ಈ ಕುರಿತು ಹೇಳಿಕೆ ನೀಡಿರುವ ಕಂಪನಿಯ ಡೈರೆಕ್ಟ್ ಆಫ್ ಕಮ್ಯೂನಿಕೇಶನ್ ಕಾರ್ಲ್ ವೂಗ್, ಕಂಪನಿಯ ಆಸ್ಟಿನ್ ಹಾಗೂ ಇತರ ಕಚೇರಿಗಳಲ್ಲಿ ಕಾಂಟ್ರಾಕ್ಟ್ ಮೇಲೆ ನೇಮಿಸಲಾಗಿರುವ ಜನರು ಸಂದೇಶಗಳನ್ನು ಪರಿಶೀಲಿಸಿ ದುರ್ವರ್ತನೆ ತೋರುವ ಜನರನ್ನು ಬ್ಲಾಕ್ ಮಾಡಲು ನೇಮಿಸಲಾಗಿದೆ ಎಂದಿದ್ದಾರೆ. ಕೇವಲ ಹಾನಿ ತಲುಪಿಸುವ ಸಂದೇಶಗಳನ್ನು ಮಾತ್ರ ಅವರು ರಿವ್ಯೂ ಮಾಡುತ್ತಾರೆ ಎಂಬುದು ಅವರ ಮಾತು.

By dtv

Leave a Reply

Your email address will not be published. Required fields are marked *

error: Content is protected !!