ದಿಸ್ಪೂರ್: ಸಂಬಂಧಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವುದು ಬಹಳ ಕಷ್ಟ. ಆದರೆ ಅಸ್ಸಾಂನ ಮಹಿಳೆಯೊಬ್ಬಳು ಕಳೆದ ಹತ್ತು ವರ್ಷಗಳಲ್ಲಿ 25 ಬಾರಿ ಹಲವುಪುರುಷರೊಂದಿಗೆ ಓಡಿಹೋಗಿದ್ದಾಳೆ ಎಂದು ಆರೋಪಿಸಲಾಗಿದೆ.
ಹೌದು, 40 ವರ್ಷದ ಮಹಿಳೆಯೊಬ್ಬಳು ಅಸ್ಸಾಂನ ನಾಗಾಂವ್ ಜಿಲ್ಲೆಯ ಧಿಂಗ್ ಲಹ್ಕರ್ ಗ್ರಾಮದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮಾಫಿಜುದ್ದೀನ್‍ರನ್ನು ವಿವಾಹವಾಗಿದ್ದಾಳೆ. ಮದುವೆಯ ಬಳಿಕ ಹತ್ತು ವರ್ಷಗಳಲ್ಲಿ 25 ಬಾರಿ ಹಲವು ಪುರುಷರೊಂದಿಗೆ ಮನೆಬಿಟ್ಟು ಓಡಿಹೋಗಿದ್ದಾಳೆ. ಹೀಗಿದ್ದರೂ ಪತಿ ಮತ್ತು ಅತ್ತೆ ಮಾತ್ರ ಯಾವುದೇ ದೂರು ನೀಡಿದೆ, ಆಕೆಯನ್ನು ಮರಳಿ ಮನೆಗೆ ಸೇರಿಸಿಕೊಂಡಿದ್ದಾರೆ. ಅಲ್ಲದೇ ಮಹಿಳೆಗೆ 3 ವರ್ಷ ಹಾಗೂ 3 ತಿಂಗಳ ಇಬ್ಬರು ಗಂಡು ಮಕ್ಕಳಿದ್ದು, 6 ವರ್ಷದ ಓರ್ವ ಮಗಳಿದ್ದಾಳೆ. ಈ ಬಗ್ಗೆ ಆಕೆಯ ನೆರೆಮನೆಯವರು, ಮಹಿಳೆ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಅಲ್ಲದೇ ಅನೇಕ ಬಾರಿ ಪ್ರೀತಿ ಮಾಡಿ ಓಡಿಹೋಗಿದ್ದಳು. ಆದರೆ ಕೆಲವು ತಿಂಗಳ ಬಳಿಕ ಅತ್ತೆ ಮನೆಗೆ ಮರಳಿದ್ದಳು ಎಂದು ಹೇಳುತ್ತಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಮಾಫಿಜುದ್ದೀನ್, ನನ್ನ ಹೆಂಡತಿ ವಾಪಸ್ ಬಂದ ಬಳಿಕ ಮತ್ತೆ ಓಡಿಹೋಗುವುದಿಲ್ಲ ಎಂದು ಮಾತು ನೀಡಿದ್ದಳು. ಆದರೆ ಆ ಮಾತನ್ನು ಉಳಿಸಿಕೊಂಡಿಲ್ಲ. ಕೆಲವು ಬಾರಿ ನನ್ನ ಹೆಂಡತಿ ತನ್ನ ಸಂಬಂಧಿಕರ ಮನೆಗೆ ಹೋಗಿರುವುದಾಗಿ ಹೇಳುತ್ತಿದ್ದಳು. ಮತ್ತೆ ಕೆಲವು ಬಾರಿ ತನ್ನ ಸಂಬಂಧಿಗೆ ಅನಾರೋಗ್ಯದ ಕಾರಣ ಅವರನ್ನು ನೋಡಲು ಹೋಗಿದ್ದೆ ಎನ್ನುತ್ತಿದ್ದಳು. ನಮಗೆ ಮೂವರು ಮಕ್ಕಳಿದ್ದಾರೆ. ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ನಾವು ಆಕೆಯನ್ನು ಮರಳಿ ಮನೆಗೆ ಸೇರಿಸಿಕೊಳ್ಳುತ್ತಿದ್ದೇವು ಎಂದಿದ್ದಾರೆ.
ಶನಿವಾರ ನಾನು ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದಾಗ, ನೆರೆ ಮನೆಯವರ ಬಳಿ ನನ್ನ ಮೂರು ತಿಂಗಳ ಮಗುವನ್ನು ಬಿಟ್ಟು ಓಡಿ ಹೋಗಿದ್ದಾಳೆ ಎಂದು ನನ್ನ ತಂದೆ ತಿಳಿಸಿದರು. ಅಲ್ಲದೇ ನೆರೆಮನೆಯವರು, ಆಡುಗಳಿಗೆ ಮೇವು ತರಲು ಹೋಗಿಬರುವುದಾಗಿ ಹೇಳಿ ಹೊರಟಿದ್ದಳು ಎಂದು ತಿಳಿಸಿದ್ದಾರೆ. ಇದೀಗ ಮತ್ತೆ ಅವಳು ಯಾವಾಗ ಹಿಂದಿರುಗುತ್ತಾಳೆ ಅಂತ ಗೊತ್ತಿಲ್ಲ. ಅಲ್ಲದೇ ಮನೆಯಲ್ಲಿದ್ದ 22,000 ಹಣ ಮತ್ತು ಕೆಲವು ವಸ್ತುಗಳನ್ನು ಜೊತೆಗೆ ತೆಗೆದುಕೊಂಡು ಹೋಗಿದ್ದಾಳೆ. ಆದರೆ ಯಾರೊಟ್ಟಿಗೆ ಹೋಗಿದ್ದಾಳೆ ಎಂಬ ಬಗ್ಗೆ ಮಾಹಿತಿ ಇಲ್ಲ. ಇದು ಅವಳು ಓಡಿ ಹೋಗುತ್ತಿರುವುದು 25ನೇ ಬಾರಿ. ಆದರೂ ನಾನು ಅವಳನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ ಹಾಗೂ ಅವಳನ್ನು ಮತ್ತೆ ಒಪ್ಪಿಕೊಳ್ಳುತ್ತೇನೆ. ನಮಗೆ ಇನ್ನೂ ಚಿಕ್ಕ, ಚಿಕ್ಕ ಮಕ್ಕಳಿದ್ದಾರೆ. ನಾನು ಅವಳನ್ನು ಒಪ್ಪಿಕೊಳ್ಳದಿದ್ದರೆ, ಅವರನ್ನು ನೋಡಿಕೊಳ್ಳುವವರ‍್ಯಾರು? ಕಾನೂನು ಮತ್ತು ಇತರೆ ಸಮಸ್ಯೆಗಳು ಆಗಬಾರದೆಂದು ನಾನು ಇನ್ನೂ ಪೊಲೀಸರಿಗೆ ದೂರು ನೀಡಿಲ್ಲ ಎಂದು ಹೇಳಿದ್ದಾರೆ.