ನವದೆಹಲಿ: ಕೊವಿಡ್ ಹಿನ್ನೆಲೆಯಲ್ಲಿ ಸೆ. 30ರವರೆಗೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಆ ನಿರ್ಬಂಧವನ್ನು ವಿಸ್ತರಿಸಲಾಗಿದ್ದು, ಭಾರತದಲ್ಲಿ ಅಕ್ಟೋಬರ್ 31ರವರೆಗೂ ಅಂತಾರಾಷ್ಟ್ರೀಯ ಕಮರ್ಷಿಯಲ್ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದೆ.
ಭಾರತದಲ್ಲಿ ಕೊವಿಡ್ ಮಾತ್ರವಲ್ಲದೆ ರೂಪಾಂತರಿ ವೈರಸ್, ನಿಫಾ ವೈರಸ್ ಹಾವಳಿಯೂ ಜಾಸ್ತಿಯಾಗಿದೆ. ಹೀಗಾಗಿ, 3ನೇ ಅಲೆಯ ಕೊರೋನಾ ಹರಡುವಿಕೆಯನ್ನು ನಿಯಂತ್ರಿಸಲು ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರದ ಮೇಲೆ ವಿಧಿಸಿದ್ದ ನಿಷೇಧವನ್ನು ಅಕ್ಟೋಬರ್ 31ರವರೆಗೂ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಈ ಬಗ್ಗೆ ಏವಿಯೇಷನ್ ರೆಗ್ಯುಲೇಟರ್ ಡೈರೆಕ್ಟೊರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಸುತ್ತೋಲೆ ಹೊರಡಿಸಿದ್ದು, ಈ ಆದೇಶ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳಿಗೆ ಮಾತ್ರ ಅನ್ವಯವಾಗಲಿದೆ. ಡಿಜಿಸಿಎಯಿಂದ ಅನುಮತಿ ಪಡೆದಿರುವ ಕಾರ್ಗೋ ವಿಮಾನಗಳ ಸಂಚಾರಕ್ಕೆ ನಿರ್ಬಂಧವಿರುವುದಿಲ್ಲ. ಹಾಗೇ ವಿಶೇಷ ಅನುಮತಿ ಪಡೆದ ಮಾರ್ಗಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರ ಮಾಡಲು ಅವಕಾಶವಿದೆ.
— DGCA (@DGCAIndia) September 28, 2021
ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್ 23ರಿಂದ ಭಾರತದಿಂದ ಹೊರಡುವ ಮತ್ತು ಆಗಮಿಸುವಂತೆ ಎಲ್ಲಾ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸಲಾಗಿದೆ. ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳ ಮೇಲಿನ ನಿರ್ಬಂಧಗಳು ಸೆ. 30ಕ್ಕೆ ಕೊನೆಗೊಳ್ಳಬೇಕಿತ್ತು. ಇದೀಗ ಮತ್ತೆ ಗಡುವನ್ನು ವಿಸ್ತರಿಸಲಾಗಿದೆ.