ತಿರುವನಂತಪುರಂ: ಕೊವಿಡ್ 19 ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ಪ್ರತಿ ತಿಂಗಳೂ ಹೆಚ್ಚುವರಿಯಾಗಿ 5 ಸಾವಿರ ರೂ. ನೀಡಲು ಕೇರಳ ಸರ್ಕಾರ ನೀಡಿದೆ. ಈ ನೆರವನ್ನು ಮೂರು ವರ್ಷಗಳ ಕಾಲ ನೀಡಲು ಕೇರಳ ರಾಜ್ಯ ಸರ್ಕಾನ ನಿರ್ಧರಿಸಿದ್ದು, ಇದು ಬಡತನ ರೇಖೆಗಿಂತ ಕೆಳಗೆ ((BPL) ಇರುವ ಕುಟುಂಬಗಳಿಗೆ ಮಾತ್ರ ಅನ್ವಯ ಆಗಲಿದೆ. ಬುಧವಾರ ಟ್ವೀಟ್ ಮಾಡಿರುವ ಕೇರಳ ಸಚಿವ ಥಾಮಸ್ ಐಸಾಕ್, ಕೊವಿಡ್ 19ನಿಂದ ಸತ್ತವರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ 50 ಸಾವಿರ ರೂ.ವಿಶೇಷ ನೆರವು ನೀಡಲಾಗುತ್ತಿದೆ.
ಈಗ ಅದರೊಂದಿಗೆ ಕೇರಳದಲ್ಲಿ ಕೊವಿಡ್ 19 ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ತಿಂಗಳಿಗೆ 5 ಸಾವಿರ ರೂ.ಮಾಸಾಶನ ಹೆಚ್ಚುವರಿಯಾಗಿ ಕೊಡಲು ನಿರ್ಧರಿಸಲಾಗಿದೆ. ಇದು ಬಿಪಿಎಲ್ ಕುಟುಂಬಗಳಿಗೆ ಮಾತ್ರ ಅನ್ವಯ ಆಗಲಿದೆ ಮತ್ತು ಮುಂದಿನ ಮೂರು ವರ್ಷಗಳ ಕಾಲ ನೀಡಲ್ಪಡುತ್ತದೆ ಎಂದು ತಿಳಿಸಿದ್ದಾರೆ. ಕೊವಿಡ್ 19 ನಿಂದ ಮೃತಪಟ್ಟವರ ಕುಟುಂಬಕ್ಕೆ 50 ಸಾವಿರ ರೂ.ನೀಡುವುದಾಗಿ ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ.
ಇದೀಗ ಕೇರಳದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಲ್ಲಿ ಯಾರಾದರೂ ಕೊರೊನಾದಿಂದ ಸತ್ತರೆ, ಅವರನ್ನು ಅವಲಂಬಿಸಿಕೊಂಡಿರುವ ಕುಟುಂಬದ ಸದಸ್ಯರಿಗೆ ತಿಂಗಳಿಗೆ 5 ಸಾವಿರ ರೂಪಾಯಿ ನೀಡಲಾಗುವುದು. ಅಂಥವರು ಈಗಾಗಲೇ ಬೇರೆ ಕೆಲವು ಸಾಮಾಜಿಕ ಕಲ್ಯಾಣ, ಕಲ್ಯಾಣ ನಿಧಿ ಮತ್ತಿತರ ಪಿಂಚಣಿ ವ್ಯವಸ್ಥೆಗೆ ಒಳಪಟ್ಟಿದ್ದರೂ ಕೂಡ ಈ ಯೋಜನೆಯಿಂದ ವಂಚಿತರಾಗುವುದಿಲ್ಲ. ಅಷ್ಟೇ ಅಲ್ಲ, ಕೇರಳದ ಬಿಪಿಎಲ್ ಕುಟುಂಬಕ್ಕೆ ಸೇರಿದ ವ್ಯಕ್ತಿ ರಾಜ್ಯದ ಒಳಗೆ, ಹೊರಗೆ ಅಥವಾ ದೇಶದ ಹೊರಗೆ ಅಂದರೆ ಬೇರೆ ದೇಶದಲ್ಲಿ ಮೃತಪಟ್ಟರೂ ಅವರ ಕುಟುಂಬ ಈ ವಿಶೇಷ ಆರ್ಥಿಕ ನೆರವಿಗೆ ಒಳಪಡುತ್ತದೆ ಎಂದು ಕ್ಯಾಬಿನೆಟ್ನಲ್ಲಿ ನಿರ್ಧಾರ ತೆಗೆದುಕೊಂಡಿದ್ದಾಗಿ ಕೇರಳ ಮುಖ್ಯಮಂತ್ರಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.
ಹಾಗೇ, ಬುಧವಾರ ನಡೆದ ಕೇರಳ ಕ್ಯಾಬಿನೆಟ್ನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಮ್ಮ ಯೋಜನೆಗೆ ಅರ್ಹರಾದವರು ಒಂದು ಪುಟದ ಅರ್ಜಿ ತುಂಬಿ ಸಲ್ಲಿಸಬೇಕಾಗುತ್ತದೆ. ಹಾಗೇ, ಇದಕ್ಕೆ ಸಂಬಂಧಪಟ್ಟ ಎಲ್ಲ ಕ್ರಮಗಳನ್ನೂ ಆಯಾ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ.
ಇನ್ನು ಕೊವಿಡ್ 19 ನಿಂದ ಮೃತಪಟ್ಟವರ ಕುಟುಂಬದಲ್ಲಿ ಯಾರೂ ಸರ್ಕಾರಿ ಉದ್ಯೋಗಿಗಳು ಮತ್ತು ತೆರಿಗೆ ತುಂಬುತ್ತಿರುವ ವ್ಯಕ್ತಿಗಳು ಇಲ್ಲವೆಂಬುದನ್ನು ಆಯಾ ಹಳ್ಳಿಗಳ ಗ್ರಾಮ ಪಂಚಾಯಿತಿ ಅಧಿಕಾರಿಗಳು ಖಚಿತಪಡಿಸಬೇಕು ಎಂಬಿತ್ಯಾದಿ ವಿಷಯಗಳನ್ನು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.