ಉತ್ತರ ಕ್ಯಾಲಿಫೋರ್ನಿಯಾದ ಮಹಿಳೆಯೊಬ್ಬಳು ತನ್ನ ಮನೆಯ ಹಿಂಭಾಗದಲ್ಲಿ ರಾಶಿ ಬಿದ್ದ ಹಾವಿನ ಮರಿಗಳನ್ನು ಕಂಡು ಬೆಚ್ಚಿಬಿದ್ದಿದ್ದಾಳೆ. ವರದಿಗಳ ಪ್ರಕಾರ, ಆಕೆಯ ನಿವಾಸದ ಹಿಂಭಾಗದಲ್ಲಿ ಸುಮಾರು 92 ಹಾವಿನ ಮರಿಗಳು ಪತ್ತೆಯಾಗಿವೆ. ತಕ್ಷಣವೇ ಹಾವು ರಕ್ಷಣಾ ಕೇಂದ್ರಕ್ಕೆ ಕರೆ ಮಾಡಿ ರಕ್ಷಣಾ ಸಿಬ್ಬಂದಿಯಿಂದ ಹಾವುಗಳನ್ನು ರಕ್ಷಿಸಲಾಗಿದೆ.
ಈ ಕುರಿತಾಗಿ ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಜತೆಗೆ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಲಾಗಿದೆ. ರಕ್ಷಣಾ ಸಿಬ್ಬಂದಿ ಹೇಳಿರುವ ಪ್ರಕಾರ, ಮನೆಯ ಹಿಂಭಾಗದಲ್ಲಿ ಹಾವುಗಳು ಪತ್ತೆಯಾಗಿವೆ ಎಂಬುದಾಗಿ ನಮಗೆ ಕರೆ ಬಂತು. ತಕ್ಷಣವೇ ಅವರು ಹೇಳಿರುವ ವಿಳಾಸಕ್ಕೆ ಹೋದೆವು, ಅಲ್ಲಿ 59 ಚಿಕ್ಕ ಹಾವಿನ ಮರಿಗಳು ಮತ್ತು 22 ಹಾವುಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಕ್ಯಾಲಿಫೋರ್ನಿಯಾದ ಅತ್ಯಂತ ಮಾರಕ ಹಾವುಗಳಿವು. ಇವು ಬೆಚ್ಚಗಿನ ಸ್ಥಳಗಳನ್ನು ಹುಡುಕುತ್ತವೆ. ಅವುಗಳು ವಾಸಿಸಲು ಈ ಜಾಗ ಹೇಳಿಮಾಡಿಸಿದಂತಿತ್ತು. ಹಾಗಾಗಿ ಹಾವು ಇಲ್ಲಿ ವಾಸಿಸುತ್ತಿವೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತಾಗಿ ವರದಿಗಳಿಂದ ಮಾಹಿತಿ ಲಭ್ಯವಾಗಿದೆ.