ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ದುಬೈಯಲ್ಲಿ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್ ಅಂತರದ ಸೋಲಿಗೆ ಶರಣಾಗಿದೆ.
ಇದರೊಂದಿಗೆ ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ (ಏಕದಿನ ಹಾಗೂ ಟ್ವೆಂಟಿ-20 ಸೇರಿದಂತೆ) ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋಲಿನ ಮುಖಭಂಗಕ್ಕೊಳಗಾಗಿದೆ. ಈ ಹಿಂದಿನ 12 ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸಿತ್ತಾದರೂ ದುಬೈಯಲ್ಲಿ ನಡೆದ ಪಂದ್ಯದಲ್ಲಿ ಮತ್ತದೇ ಫಲಿತಾಂಶ ಮರುಕಳಿಸಲು ವಿರಾಟ್ ಕೊಹ್ಲಿ ಬಳಗಕ್ಕೆ ಸಾಧ್ಯವಾಗಲಿಲ್ಲ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ತಂಡಕ್ಕೆ ಮೊದಲ ಓವರ್’ನಲ್ಲಿ ಆಘಾತ ಎದುರಾಯಿತು. ಆರಂಭಿಕ ಆಟಗಾರ ರೋಹಿತ್ ಶರ್ಮಾ ಡಕ್ ಔಟ್ ಆದರು. ಕೆಎಲ್ ರಾಹುಲ್ 8 ಎಸೆತಗಳನ್ನು ಆಡಿ 3 ರನ್ ಗಳಿಸಿ ಪೆವಿಲಿಯನ್ ಸೇರಿದರು. ಸೂರ್ಯಕುಮಾರ್ ಯಾದವ್ ಅವರು ಸಿಕ್ಸರ್ ಬಾರಿಸುವ ಸ್ವಿಂಗ್‌ನಲ್ಲಿದ್ದರು ಆದರೆ 11 ರನ್ ಗಳಿಸಿ ಔಟಾದರು.
32 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಕೊಹ್ಲಿ ಹಾಗೂ ರಿಷಬ್ ಪಂತ್ ಮುನ್ನಡೆಸಿದರು. ರಿಷಭ್ ಪಂತ್ 30 ಎಸೆತಗಳಲ್ಲಿ 39 ರನ್ (2 ಬೌಂಡರಿ, 2 ಸಿಕ್ಸರ್) ಶದಬ್ ಖಾನ್ ಎಸೆದ 12 ನೇ ಓವರ್ ನ ಎರಡನೇ ಎಸೆತದಲ್ಲಿ ಪಂತ್ ಶಾರ್ಟ್ ಬಾಲ್ಗೆ ಔಟಾದರು. ನಂತರ ಬಂದ ರವೀಂದ್ರ ಜಡೇಜಾ 12 ಎಸೆತಗಳಲ್ಲಿ 13 ರನ್ ಗಳಿಸಿ ನಿರಾಸೆ ಮೂಡಿಸಿದರು. ಹಾರ್ದಿಕ್ ಪಾಂಡ್ಯ ಏಳು ಎಸೆತಗಳಲ್ಲಿ 11 ರನ್ ಗಳಿಸಿ ಪೆವಿಲಿಯನ್ ಸೇರಿದರು. ಕೊನೆಯಲ್ಲಿ ಭುವನೇಶ್ವರ್ 5 ರನ್ ಗಳಿಸಿದ್ದರಿಂದ ಶಮಿಗೆ ಸ್ಟ್ರೈಕ್ ಸಿಗಲಿಲ್ಲ. ಪಾಕಿಸ್ತಾನದ ಬೌಲರ್ಗಳಲ್ಲಿ ಶಾಹೀನ್ ಅಫ್ರಿದಿ 3 ವಿಕೆಟ್, ಹಸನ್ ಅಲಿ 2 ವಿಕೆಟ್, ಶಾದಬ್ ಖಾನ್ 1 ವಿಕೆಟ್ ಮತ್ತು ರೌಫ್ 1 ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಪಾಕಿಸ್ತಾನ ಯಾವುದೇ ಒತ್ತಡವಿಲ್ಲದೇ ಜಯಗಳಿಸಿತು. ಆರಂಭಿಕ ಆಟಗಾರ ನಾಯಕ ಬಾಬರ್ ಆಜಂ (68) ಹಾಗೂ ಮೊಹಮ್ಮದ್ ರಿಜ್ವಾನ್ (79) ಶತಕದ ಜೊತೆಯಾಟದ ನೆರವಿನಿಂದ 17.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಭರ್ಜರಿ ಗೆಲುವು ದಾಖಲಿಸಿತು.