dtvkannada

ದುಬೈ: ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಅವರ ಬಿರುಸಿನ ಆಟದ ನೆರವಿನಿಂದ 2021 ರ ಟಿ 20 ವಿಶ್ವಕಪ್ ಅನ್ನು ಆಸ್ಟ್ರೇಲಿಯಾ ವಶಪಡಿಸಿಕೊಂಡಿದೆ. ನ್ಯೂಜಿಲೆಂಡ್‌ನಿಂದ 173 ರನ್‌ಗಳ ಸವಾಲನ್ನು ಆಸ್ಟ್ರೇಲಿಯಾ ತಂಡ 19ನೇ ಓವರ್’ನಲ್ಲಿ ಮುಗಿಸಿ ಜಯಗಳಿಸಿದೆ.

ಮಾರ್ಷ್ ಮತ್ತು ವಾರ್ನರ್ ಅವರ ಅಮೋಘ ಅರ್ಧಶತಕಗಳು ಆಸ್ಟ್ರೇಲಿಯಾವನ್ನು ಮೊದಲ ಬಾರಿಗೆ T20 ವಿಶ್ವ ಚಾಂಪಿಯನ್ ಮಾಡಿತು. ವೇಗದ ಬೌಲರ್ ಜೋಶ್ ಹೇಜಲ್ ವುಡ್ ಕೂಡ ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹ್ಯಾಜಲ್ ವುಡ್ 4 ಓವರ್ಗಳಲ್ಲಿ 16 ರನ್ ನೀಡಿ 3 ವಿಕೆಟ್ ಪಡೆದರು. ಅದೇ ವೇಳೆ ಆಂಡಮ್ ಝಂಪಾ ಕೂಡ 4 ಓವರ್ಗಳಲ್ಲಿ 26 ರನ್ ನೀಡಿ 1 ವಿಕೆಟ್ ಪಡೆದರು.

ಈ ಮೊದಲು ಟಾಸ್ ಗೆದ್ದ ಆಸ್ಟ್ರೇಲಿಯಾ ನಿರೀಕ್ಷೆಯಂತೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆಸ್ಟ್ರೇಲಿಯಾ ಬೌಲರ್‌ಗಳು ಕಿವೀಸ್‌ಗೆ ಆರಂಭದಲ್ಲಿಯೇ ಪೆಟ್ಟು ಕೊಟ್ಟರು. ಒಂದು ಹಂತದಲ್ಲಿ ನಾಯಕ ಕೇನ್ ವಿಲಿಯಮ್ಸನ್ (85ರನ್ 48ಎಸೆತ, 10ಬೌಂಡರಿ, 3ಸಿಕ್ಸರ್) ನ್ಯೂಜಿಲೆಂಡ್ ತಂಡಕ್ಕೆ ಆಸರೆಯಾದರು. ಅದರಿಂದಾಗಿ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 172 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು.

ಗುರಿ ಬೆನ್ನತ್ತಿದ ಕಾಂಗರೂ ತಂಡದ ಆರಂಭಿಕ ಆಟಗಾರ ಪಿಂಚ್ ಕೇವಲ 5 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ಟ್ರೆಂಟ್ ಬೌಲ್ಟ್‌ಗೆ ಬಲಿಯಾದರು. ಇದಾದ ನಂತರ ಕ್ರೀಸ್‌ಗೆ ಬಂದ ಮಿಚೆಲ್ ಮಾರ್ಷ್ ಮೊದಲ ಎಸೆತದಲ್ಲಿಯೇ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಇಂಗಿತವನ್ನು ತೋರಿದರು. ಮಾರ್ಷ್ ಬಂದ ತಕ್ಷಣ ಡೇವಿಡ್ ವಾರ್ನರ್ ಕೂಡ ಆಕ್ರಮಣಕಾರಿ ನಿಲುವು ತಳೆದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಕೇವಲ 35 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡರು. ಮೊದಲ 10 ಓವರ್‌ಗಳಲ್ಲಿ ಆಸ್ಟ್ರೇಲಿಯಾ 82 ರನ್ ಗಳಿಸಿತು. ಡೇವಿಡ್ ವಾರ್ನರ್ 34 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅರ್ಧಶತಕ ಗಳಿಸಿದ ತಕ್ಷಣ ವಾರ್ನರ್ ತಮ್ಮ ವೈಯಕ್ತಿಕ ಸ್ಕೋರ್ 53 ರನ್‌ಗಳಲ್ಲಿ ಬೋಲ್ಟ್‌ಗೆ ಬಲಿಯಾದರು, ಆದರೆ ಮಾರ್ಷ್ ಕ್ರೀಸ್‌ನಲ್ಲಿಯೇ ಇದ್ದರು.

ಮಾರ್ಷ್ ತಮ್ಮ ಭರ್ಜರಿ ಬ್ಯಾಟಿಂಗ್ ಮುಂದುವರಿಸಿ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮಿಚೆಲ್ ಮಾರ್ಷ್ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅತಿವೇಗವಾಗಿ ಅರ್ಧಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದೇ ಪಂದ್ಯದಲ್ಲಿ 32 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಕೇನ್ ವಿಲಿಯಮ್ಸನ್ ದಾಖಲೆ ಮುರಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಮಾರ್ಷ್ ಅವರೊಂದಿಗೆ ಅತ್ಯುತ್ತಮ ಇನ್ನಿಂಗ್ಸ್ ಆಡಿದರು ಮತ್ತು ಅವರು ಒಟ್ಟಾಗಿ ಆಸ್ಟ್ರೇಲಿಯಾಕ್ಕೆ ಮೊದಲ T20 ವಿಶ್ವಕಪ್ ಜಯವನ್ನು ನೀಡಿದರು.

By dtv

Leave a Reply

Your email address will not be published. Required fields are marked *

error: Content is protected !!