ನವದೆಹಲಿ: ಕೇಂದ್ರ ಸರ್ಕಾರ ಘೋಷಿಸಿದ್ದ ಮೂರು ಕೃಷಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ರೈತರ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಘೋಷಿಸಿದ್ದಾರೆ.
ಹೋರಾಟ ಮಾಡುತ್ತಿರುವ ರೈತರು ಮನೆಗೆ ತೆರಳಲು ಪ್ರಧಾನಿ ಮನವಿ ಮಾಡಿದ್ದಾರೆ.ಭಾಷಣದಲ್ಲಿ ಮೊದಲು ರೈತರ ಸಮಸ್ಯೆಯ ಕುರಿತು ಮಾತನಾಡಿದ ಪ್ರಧಾನಿ, ರೈತರ ಸಮಸ್ಯೆ ಬಗೆಹರಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ದೇಶದಲ್ಲಿ 100ರಲ್ಲಿ 80 ಪ್ರತಿಶತ ರೈತರು ಸಣ್ಣ ಹಿಡುವಳಿ ರೈತರಾಗಿದ್ದು, 10 ಕೋಟಿಗಿಂತ ಹೆಚ್ಚು ಸಣ್ಣ ರೈತರಿದ್ದಾರೆ. ಅವರ ಸಮಸ್ಯೆಗಳನ್ನು ನಾನು ಅರಿತಿದ್ದೇನೆ. ಅದನ್ನು ಬಗೆಹರಿಸಲು ಪ್ರಯತ್ನ ಮಾಡಲಾಗುತ್ತಿದ್ದು, ಬೀಜ, ವಿಮೆ, ಮಾರುಕಟ್ಟೆ, ಉಳಿತಾಯಕ್ಕೆ ಯೋಜನೆಗಳಿಗಾಗಿ ರೈತರಿಗೆ ಫಸಲ್ ಬಿಮಾ, ಪೆನ್ಷನ್ ಯೋಜನೆ ಜಾರಿಗೆ ತಂದಿದ್ದೇವೆ.
ಕೃಷಿ ಮಾರುಕಟ್ಟೆ ಆಧುನೀಕರಣಕ್ಕೆ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆ. ರೈತರು ಈಗ ಎಲ್ಲಿ ಬೇಕಾದರೂ ತಮ್ಮ ಬೆಳೆ ಮಾರಬಹುದು. ಕೃಷಿ ಬಜೆಟ್ ಮೊದಲಿಗಿಂತ 5 ಪಟ್ಟು ಹೆಚ್ಚಿಸಿದ್ದೇವೆ. ರೈತರಿಗೆ 22 ಕೋಟಿ ಸಾಯಿಲ್ ಹೆಲ್ತ್ ಕಾರ್ಡ್ ನೀಡಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.