ಕಾನ್ಪುರ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ಶ್ರೇಯಸ್ ಅಯ್ಯರ್ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಅವರ ಪದಾರ್ಪಣೆ ಪಂದ್ಯವಾಗಿದೆ.
ಶುಕ್ರವಾರ ಎರಡನೇ ದಿನದಾಟ ಆರಂಭಿಸಿದ ಶ್ರೇಯಸ್ ಅಯ್ಯರ್ (105), ರವೀಂದ್ರ ಜಡೇಜಾ (50), ಜೋಡಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಆಡಲಿಲ್ಲ. ಇವರಿಬ್ಬರ ವಿಕೆಟ್ ಪಡೆಯುವಲ್ಲಿ ಟಿಮ್ ಸೌಥಿ ಯಶಸ್ವಿಯಾದರು.
ಗುರುವಾರ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 4 ವಿಕೆಟ್ ಕಳೆದುಕೊಂಡು 258 ರನ್ ಗಳಿಸಿತ್ತು. ಅಯ್ಯರ್ –ಜಡೇಜಾ 113 ರನ್‌ಗಳ ಜೊತೆಯಾಟವಾಡಿದ್ದರು.
ನಾಯಕ ವಿರಾಟ್ ಕೊಹ್ಲಿ, ಅನುಭವಿ ರೋಹಿತ್ ಶರ್ಮಾ ಮತ್ತು ಗಾಯಾಳು ಕೆ.ಎಲ್. ರಾಹುಲ್ ಈ ಪಂದ್ಯದಲ್ಲಿ ಕಣಕ್ಕಿಳಿದಿಲ್ಲ. ಕೊಹ್ಲಿ ಜಾಗದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದ ಅಯ್ಯರ್, ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.
26 ವರ್ಷದ ಶ್ರೇಯಸ್ ಅಯ್ಯರ್ 2017 ರಲ್ಲಿ ಭಾರತ ಪರ ಏಕದಿನ ಮತ್ತು ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಆದರೆ, ಇವರಿಗೆ ಟೆಸ್ಟ್ ಕ್ಯಾಪ್ ಸಿಕ್ಕಲು 4 ವರ್ಷ ಕಾಯಬೇಕಾಯಿತು. ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಯ್ಯರ್ 171 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್ನೊಂದಿಗೆ 105 ರನ್ ಬಾರಿಸಿದರು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಇವರ ಆಟ ಬೊಂಬಾಟ್ ಆಗಿದ್ದು, 4592 ರನ್ ಗಳಿಸಿದ್ದಾರೆ. ಇದರಲ್ಲಿ 12 ಶತಕ ಮತ್ತು 23 ಅರ್ಧಶತಕ ಸೇರಿವೆ. ಇತ್ತೀಚೆಗಷ್ಟೆ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ ಅಯ್ಯರ್ಗೆ ಮೀಸಲು ಆಟಗಾರನಾಗಿಯಷ್ಟೆ ಅವಕಾಶ ನೀಡಲಾಗಿತ್ತು.