ಸೆಂಚುರಿಯನ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 113 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವನ್ನು ಎದುರು ನೋಡುತ್ತಿರುವ ವಿರಾಟ್ ಕೊಹ್ಲಿ ಬಳಗವು, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ.

305 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು ಅಂತಿಮ ದಿನದಾಟದಲ್ಲಿ 68 ಓವರ್‌ಗಳಲ್ಲಿ 191 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
ನಾಲ್ಕನೇ ದಿನದಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿ ಸಂಕಷ್ಟದಲ್ಲಿದ್ದ ದಕ್ಷಿಣ ಆಫ್ರಿಕಾಗೆ ನಾಯಕ ಡೀನ್ ಎಲ್ಗರ್ (77) ಹಾಗೂ ತೆಂಬ ಬಾವುಮ (35*) ಹೊರತಾಗಿ ಇತರೆ ಯಾವ ಬ್ಯಾಟ್ಸ್ ಮ್ಯಾನ್ ಕೂಡ ಹೆಚ್ಚು ಹೊತ್ತು ಕ್ರೀಸ್’ನಲ್ಲಿ ಉಳಿಯಲಿಲ್ಲ
156 ಎಸೆತಗಳನ್ನು ಎದುರಿಸಿದ ಎಲ್ಗರ್ 12 ಬೌಂಡರಿಗಳ ನೆರವಿನಿಂದ 77 ರನ್ ಗಳಿಸಿದರು. ಬಾವುಮ 35 ರನ್ ಗಳಿಸಿ ಔಟಾಗದೆ ಉಳಿದರು.
ಭಾರತದ ಪರ ಪ್ರಭಾವಿ ದಾಳಿ ಸಂಘಟಿಸಿದ ಜಸ್‌ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ತಲಾ ಮೂರು ಮತ್ತು ಮೊಹಮ್ಮದ್ ಸಿರಾಜ್ ಹಾಗೂ ರವಿಚಂದ್ರನ್ ಅಶ್ವಿನ್ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು.
ಈ ಮೊದಲು ಕೆ.ಎಲ್. ರಾಹುಲ್ ಆಕರ್ಷಕ ಶತಕದ ನೆರವಿನಿಂದ ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 327 ರನ್ ಪೇರಿಸಿತ್ತು. ಬಳಿಕ ಮೊಹಮ್ಮದ್ ಶಮಿ ದಾಳಿಗೆ ಸಿಲುಕಿದ (44ಕ್ಕೆ 5 ವಿಕೆಟ್) ದಕ್ಷಿಣ ಆಫ್ರಿಕಾ 197ಕ್ಕೆ ಆಲೌಟ್ ಆಗಿತ್ತು. ಈ ಮೂಲಕ ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 130 ರನ್‌ಗಳ ಮಹತ್ವದ ಮುನ್ನಡೆ ಗಳಿಸಿತ್ತು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ 174 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಮೂಲಕ ದಕ್ಷಿಣ ಆಫ್ರಿಕಾ ಗೆಲುವಿಗೆ 305 ರನ್‌ಗಳ ಗುರಿ ಒಡ್ಡಿತ್ತು.
https://twitter.com/BCCI/status/1476506120067813376?