ನವದೆಹಲಿ: ಚುನಾವಣೆ ಹೊಸ್ತಿಲಲ್ಲಿರುವ ಪಂಚ ರಾಜ್ಯಗಳಲ್ಲಿ ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿ ಚಿತ್ರವನ್ನು ತೆರವುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಹಾಗೂ ಮಣಿಪುರ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗವು ಶನಿವಾರ (ಜ. 8) ಪ್ರಕಟಿಸಿದೆ.
ಇದರಿಂದಾಗಿ ಈ ಎಲ್ಲ ರಾಜ್ಯಗಳಲ್ಲಿ ಈಗಿನಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿದೆ.
‘ಎನ್‌ಡಿಟಿವಿ’ ವರದಿ ಪ್ರಕಾರ, ಪ್ರಧಾನಿ ಮೋದಿ ಚಿತ್ರ ತೆಗೆದು ಹಾಕುವ ನಿಟ್ಟಿನಲ್ಲಿ ಕೋ-ವಿನ್ ಫ್ಲ್ಯಾಟ್‌ಫಾರ್ಮ್‌ನಲ್ಲಿ ಅಗತ್ಯ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ.
ಕಳೆದ ವರ್ಷ ಎಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆದ ರಾಜ್ಯಗಳಲ್ಲೂ ವಿರೋಧ ಪಕ್ಷಗಳ ವ್ಯಾಪಕ ದೂರಿನ ಮೇರೆಗೆ ಇದಕ್ಕೆ ಸಮಾನವಾದ ಕ್ರಮ ಕೈಗೊಳ್ಳಲಾಗಿತ್ತು.
ಕೋವಿಡ್ ಲಸಿಕೆ ಅಭಿಯಾನವನ್ನು ಜನರ ಜೀವ ಉಳಿಸುವ ಸಾಧನವಾಗಿ ಬಳಸುವುದಕ್ಕಿಂತ ಹೆಚ್ಚಾಗಿ ಪ್ರಧಾನಿ ಮೋದಿ ಅವರು ತಮ್ಮ ವೈಯಕ್ತಿಕ ಪ್ರಚಾರಕ್ಕಾಗಿ ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪಂಚ ರಾಜ್ಯಗಳ ಚುನಾವಣೆಯು ಫೆಬ್ರವರಿ 10ರಿಂದ ಆರಂಭವಾಗಿ ಮಾರ್ಚ್ 7ರ ವರೆಗೆ ನಡೆಯಲಿದೆ. ಬಳಿಕ ಮಾರ್ಚ್ 10ರಂದು ಮತ ಎಣಿಕೆ ನಿಗದಿಯಾಗಿದೆ.
ಇತ್ತೀಚೆಗೆ ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರ ಇರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿತ್ತು. ಅಲ್ಲದೆ ನ್ಯಾಯಾಂಗದ ಅಮೂಲ್ಯ ಸಮಯ ವ್ಯರ್ಥ ಮಾಡಿದ ಅರ್ಜಿದಾರನಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತ್ತು