ಏಳು ರಾಜ್ಯಗಳ ಒಟ್ಟು 14 ಮಹಿಳೆಯರನ್ನು ವಿವಾಹವಾಗಿ ವಂತಿಸಿದ್ದ ವ್ಯಕ್ತಿಯನ್ನು ಒಡಿಶಾ ದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಕಳೆದ 48 ವರ್ಷಗಳಲ್ಲಿ 14 ಮಹಿಳೆಯರನ್ನು ವಿವಾಹವಾಗಿದ್ದರು. ಬೇರೆ ಬೇರೆ ರಾಜ್ಯಗಳಿಗೆ ಹೋಗುವುದು, ಅಲ್ಲಿ ಸಿಕ್ಕ ಮಹಿಳೆಯನ್ನು ಮದುವೆಯಾಗುವುದು ಮತ್ತು ಅವರ ಬಳಿಯಿದ್ದ ಹಣವನ್ನೆಲ್ಲ ದೋಚಿ ಓಡಿ ಹೋಗುವುದೇ ಕಾಯಕವಾಗಿತ್ತು. ಇವರು ಒಡಿಶಾದ ಕೇಂದ್ರಪರ ಜಿಲ್ಲೆಯವರಾಗಿದ್ದು, ಪೊಲೀಸರು ಬಂಧಿಸಿದ ಮೇಲೆ ಕೂಡ ತಾನು ಯಾವುದೇ ಆರೋಪ ಮಾಡಿಲ್ಲ ಎಂದೇ ಹೇಳುತ್ತಿದ್ದಾರೆ.
ಈ ವ್ಯಕ್ತಿ ಮೊದಲು ವಿವಾಹವಾಗಿದ್ದು 1982ರಲ್ಲಿ. ಎರಡನೇ ಬಾರಿಗೆ 2002ರಲ್ಲಿ ವಿವಾಹವಾದ. ಈ ಇಬ್ಬರು ಪತ್ನಿಯರಿಂದ ಐವರು ಮಕ್ಕಳು ಹುಟ್ಟಿದರು. ಅದಾದ ನಂತರ 2002ರಿಂದ 2020ರವರೆಗೆ ಉಳಿದ ಮದುವೆಯಾದ.
ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಮೂಲಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು, ತಾನೊಬ್ಬ ಅವಿವಾಹಿತ ಎಂದು ಬಿಂಬಿಸಿ ಕೃತ್ಯ ಎಸಗುತ್ತಿದ್ದ. ಇದು ಆತನ ಮೊದಲ ಇಬ್ಬರು ಪತ್ನಿಯರಿಗೆ ಗೊತ್ತಿರಲಿಲ್ಲ ಎಂದು ಭುವನೇಶ್ವರ್ ಡೆಪ್ಯೂಟಿ ಕಮಿಷನರ್ ಪೊಲೀಸ್ ಉಮಾಶಂಕರ್ ದಾಸ್ ತಿಳಿಸಿದ್ದಾರೆ.
ಸದ್ಯ ಆತ ತನ್ನ 14ನೇ ಪತ್ನಿಯೊಂದಿಗೆ ಒಡಿಶಾದ ರಾಜಧಾನಿ ಭುವನೇಶ್ವರ್ನಲ್ಲಿ ವಾಸವಾಗಿದ್ದ. ಈಕೆ ಮೊದಲು ದೆಹಲಿಯಲ್ಲಿ ಶಾಲೆಯ ಶಿಕ್ಷಕಿಯಾಗಿದ್ದಳು. ಅದು ಹೇಗೋ ತನ್ನ ಪತಿಯ ಹಿಂದಿನ ಮದುವೆಯ ಬಗ್ಗೆಯೆಲ್ಲ ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದರು.
ಈ ವ್ಯಕ್ತಿ ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ಹೆಚ್ಚಾಗಿ ಮಧ್ಯ ವಯಸ್ಸಿನ, ವಿವಾಹವಾಗದೆ ಉಳಿದ ಮಹಿಳೆಯರನ್ನು, ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಬಳಿಕ ಅವರನ್ನು ನಂಬಿಸಿ, ತಾನು ಒಳ್ಳೆಯವನು ಎಂಬಂತೆ ಬಿಂಬಿಸಿಕೊಂಡು ವಿವಾಹವಾಗುತ್ತಿದ್ದ. ಕೊನೆಯಲ್ಲಿ ಅವರ ಬಳಿಯಿದ್ದ ಹಣ, ಒಡವೆಗಳನ್ನೆಲ್ಲ ದೋಚಿ ಪರಾರಿಯಾಗುತ್ತಿದ್ದ. ಈತನ ನಾಟಕ ಅದೆಷ್ಟರ ಮಟ್ಟಿಗೆ ಇತ್ತೆಂದರೆ, ತಾನೊಬ್ಬ ವೈದ್ಯ ಎಂದು ಹೇಳಿಕೊಳ್ಳುತ್ತಿದ್ದ. ಸದ್ಯ ಈತನಿಂದ ಮೋಸ ಹೋದವರಲ್ಲಿ ಲಾಯರ್ಗಳು, ವೈದ್ಯರು, ಶಿಕ್ಷಣವಂತ ಮಹಿಳೆಯರು ಅಷ್ಟೇ ಅಲ್ಲ, ಪ್ಯಾರಾ ಮಿಲಿಟರಿ ಫೋರ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರೂ ಸೇರಿದ್ದಾರೆ. ಇಲ್ಲಿಯವರೆಗೆ ದೆಹಲಿ, ಪಂಜಾಬ್, ಆಸ್ಸಾಂ, ಜಾರ್ಖಂಡ ಮತ್ತು ಒಡಿಶಾದ ಮಹಿಳೆಯರನ್ನ ವಂಚಿಸಿದ್ದಾನೆ.
ಆಗಲೇ ಹೇಳಿದಂತೆ ಕೊನೇ ಪತ್ನಿ, ದೆಹಲಿಯಲ್ಲಿ ಶಿಕ್ಷಕರಿಯಾಗಿದ್ದವರು ಈತನನ್ನು 2018ರಲ್ಲಿ ವಿವಾಹವಾಗಿದ್ದರು. ದೆಹಲಿಯಲ್ಲಿ ವಿವಾಹವಾಗಿ ಭುವನೇಶ್ವರಕ್ಕೆ ಅವರನ್ನು ಕರೆತಂದಿದ್ದ. ಅಲ್ಲೇ ಅವರಿಗೆ ಪತಿಯ ಕರ್ಮಕಾಂಡ ಗೊತ್ತಾಗಿದೆ. ಇದೀಗ ಆಕೆಯ ದೂರಿನ ಅನ್ವಯ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಆತನಿಂದ 11 ಎಟಿಎಂ ಕಾರ್ಡ್ಗಳು, ನಾಲ್ಕು ಆಧಾರ್ಕಾರ್ಡ್ಗಳು, ಮತ್ತಿತರ ನಕಲಿ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತ ನಿರುದ್ಯೋಗಿ ಯುವಕರನ್ನು ನಂಬಿಸಿ, ಅವರಿಗೆ ಸಾಲ ವಂಚನೆ ಮಾಡಿದ ಆರೋಪದಡಿ ಈ ಹಿಂದೆಯೂ ಕೂಡ ಎರಡು ಬಾರಿ ಬಂಧಿತನಾಗಿದ್ದ. ಆಗ ಹೈದರಾಬಾದ್ ಮತ್ತು ಎರ್ನಾಕುಲಂನಲ್ಲಿ ನಿರುದ್ಯೋಗಿಗಳನ್ನು ವಂಚಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.