ಕ್ಷುಲ್ಲಕ ವಿಚಾರಕ್ಕೆ ಸಂಭಂಧಿಸಿ ಸಹಪಾಠಿ ಯುವತಿಯನ್ನು ಗುಂಡಿಕ್ಕಿ ಕೊಂದ ಘಟನೆ ಉತ್ತರಖಂಡದ ಡೆಹ್ರಾಡೂನ್ ಜಿಲ್ಲೆಯಲ್ಲಿ ನಡೆದಿದೆ.
ಕಾಲೇಜಿನಲ್ಲಿ ತನ್ನ ಸಹಪಾಠಿ ಯುವತಿಯನ್ನು ಕೊಂದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹತ್ಯೆಯಾದ ಯುವತಿಯನ್ನು ವಂಶಿಕಾ ಬನ್ಸಾಲ್(21) ಎಂದು ಗುರುತಿಸಲಾಗಿದ್ದು, ರಾಯ್ಪುರ ಠಾಣೆ ವ್ಯಾಪ್ತಿಯ ದಾದಾ ನಗರದಲ್ಲಿ ಹಾಸ್ಟೆಲ್ವೊಂದರಲ್ಲಿ ವಾಸವಾಗಿದ್ದಳು. ಈಕೆ ಡೆಹ್ರಾಡೂನ್ನ ಸಿದ್ಧಾರ್ಥ ಕಾಲೇಜಿನಲ್ಲಿ ಡಿ ಫಾರ್ಮಾ ಓದುತ್ತಿದ್ದಳು
ಕೊಲೆ ಆರೋಪಿಯ ಹೆಸರು ಆದಿತ್ಯ ತೋಮರ್ (21) ಎಂದಾಗಿದ್ದು, ವಂಶಿಕಾ ತನ್ನ ಸ್ನೇಹಿತೆಯರೊಂದಿಗೆ ಹೊರಗೆ ಹೋಗಿದ್ದ ಸಂದರ್ಭ ನೋಡಿಕೊಂಡು ಆಕೆಯನ್ನು ಕೊಂದಿದ್ದಾನೆ. ಈ ಬಗ್ಗೆ ಡೆಹ್ರಾಡೂನ್ ಎಸ್ಎಸ್ಪಿ ಜನ್ಮೇಜಯ್ ಖಾದುರಿ ಮಾಹಿತಿ ನೀಡಿದ್ದು, ವಿದ್ಯಾರ್ಥಿನಿ ವಂಶಿಕಾ ಬನ್ಸಾಲ್ ಡೂನ್ನಲ್ಲಿರುವ ಕಾಲೇಜು ಹಾಸ್ಟೇಲ್ನಲ್ಲಿ ವಾಸವಾಗಿದ್ದಳು. ಗುರುವಾರ ಸಂಜೆ ಆಕೆ ತನ್ನ ಸ್ನೇಹಿತೆ ಮಮತಾ ಎಂಬಾಕೆಯೊಂದಿಗೆ ಕಾಲೇಜು ಹಾಸ್ಟೆಲ್ನ ಬಳಿಯೇ ಇರುವ ಒಂದು ಅಂಗಡಿಯಲ್ಲಿ ನಿಂತಿದ್ದಳು. ಆಗ ಅಲ್ಲಿಗೆ ಈ ಆದಿತ್ಯ ತೋಮರ್ ಬೈಕ್ನಲ್ಲಿ ಬಂದಿದ್ದಾನೆ. ಈತ ಉತ್ತರಾಖಂಡ್ನ ಸುಂದರ್ವಾಲಾ ರಾಯ್ಪುರದ ನಿವಾಸಿ. ಬೈಕ್ನಲ್ಲಿ ಬಂದವನೇ ವಂಶಿಕಾಳನ್ನು ಎಳೆದಾಡಿದ್ದಾನೆ. ಅಷ್ಟೇ ಅಲ್ಲ, ಬೈಕ್ ಮೇಲೆ ಕುಳಿತುಕೊಳ್ಳುವಂತೆ ಬಲವಂತ ಮಾಡಿದ್ದಾನೆ.
ಇದಕ್ಕೆ ವಂಶಿಕಾ ಒಪ್ಪದೆ ಇದ್ದಾಗ ಆಕೆಯ ಎದೆಗೆ ಗುಂಡು ಹೊಡೆದು ಅಲ್ಲಿಂದ ಪರಾರಿಯಾಗಿದ್ದ. ಬೈಕ್, ಗನ್ಗಳನ್ನೂ ಅಲ್ಲೇ ಬಿಟ್ಟು ಹೋಗಿದ್ದ. ವಂಶಿಕಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಸ್ಥಳದಲ್ಲಿ ಇದ್ದವರನ್ನು ವಿಚಾರಣೆ ನಡೆಸಿದಾಗ ಸಿಕ್ಕ ಮಾಹಿತಿ ಆಧಾರದ ಮೇಲೆ ಪೊಲೀಸ್ ತಂಡ ಆರೋಪಿ ಪತ್ತೆ ಕಾರ್ಯ ಶುರು ಮಾಡಲಾಗಿತ್ತು. ಕೆಲವೇ ಹೊತ್ತಲ್ಲಿ ಆರೋಪಿ ಆದಿತ್ಯನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆದಿತ್ಯ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ತಾನ್ಯಾಕೆ ಆಕೆಯ ಮೇಲೆ ಶೂಟ್ ಮಾಡಿದೆ? ಆಕೆಯ ಮೇಲಿದ್ದ ಕೋಪವೇನು ಎಂಬ ವಿವರವನ್ನು ಬಿಚ್ಚಿಟ್ಟಿದ್ದಾನೆ.
ಈಗೊಂದು ತಿಂಗಳ ಹಿಂದೆ ವಂಶಿಕಾ ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಅಪ್ಲೋಡ್ ಮಾಡಿದ್ದಳು. ಆ ಫೋಟೊಕ್ಕೆ ಆದಿತ್ಯ ಒಂದು ಕಮೆಂಟ್ ಮಾಡಿದ್ದ. ಇದೇ ಕಮೆಂಟ್ ವಿಚಾರಕ್ಕೆ ವಂಶಿಕಾ ಮತ್ತು ಆದಿತ್ಯ ನಡುವೆ ಗಲಾಟೆಯಾಗಿತ್ತು. ಅಷ್ಟೇ ಅಲ್ಲ, ವಂಶಿಕಾ ತನ್ನ ಸ್ನೇಹಿತರ ಬಳಿಯೂ ಈ ಬಗ್ಗೆ ದೂರು ಹೇಳಿಕೊಂಡಿದ್ದರು. ಆದಿತ್ಯ ಮತ್ತು ವಂಶಿಕಾ ಸಹಪಾಠಿಗಳಾಗಿದ್ದರಿಂದ ಸಹಜವಾಗಿ ಈಕೆಗೆ ಸ್ನೇಹಿತರಾಗಿದ್ದವರೇ ಅವನಿಗೂ ಗೊತ್ತಿರುವವರೇ ಆಗಿದ್ದರು.
ವಂಶಿಕಾ ಸ್ನೇಹಿತರೆಲ್ಲ ಸೇರಿ, ಆದಿತ್ಯನ ಬಳಿ ಕ್ಷಮೆ ಕೇಳಿಸಿದ್ದರೂ. ಅದೂ ಕೂಡ ಆತ ವಂಶಿಕಾಳ ಕಾಲುಮುಟ್ಟಿ ಕ್ಷಮೆ ಕೇಳುವಂತೆ ಮಾಡಿದ್ದರು. ಇದು ತನಗೆ ಅವಮಾನ ಎಂದು ಆದಿತ್ಯ ತೋಮರ್ ಸಿಕ್ಕಾಪಟೆ ಸಿಟ್ಟು ಮಾಡಿಕೊಂಡಿದ್ದ. ವಂಶಿಕಾ ಬಳಿ ಮತ್ತೆ ಜಗಳವಾಡಿದ್ದ. ಆ ಕೋಪದಿಂದಲೇ ಆತ ವಂಶಿಕಾ ಮೇಲೆ ಹಾಡಹಗಲೇ ಗುಂಡು ಹಾರಿಸಿದ್ದಾನೆ ಎಂದು ತಿಳಿದು ಬಂದಿದೆ.