ಮುಜಾಫರ್‌ನಗರ: ಗುರುವನ್ನು ದೇವರ ಸ್ಥಾನದಲ್ಲಿ ಇರಿಸಲಾಗಿದೆ. ತಂದೆ-ತಾಯಿಯಂತೆ ಗುರುಗಳು ಕೂಡ ವಿದ್ಯಾರ್ಥಿಗಳನ್ನು ಉತ್ತಮ ದಾರಿಯಲ್ಲಿ ನಡೆಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಾರೆ. ಆದರೆ, ಇಲ್ಲೊಬ್ಬ 71 ವರ್ಷದ ಪ್ರಾಂಶುಪಾಲರು (Principal) ತನ್ನ ಶಾಲೆಯಲ್ಲಿ ಓದುತ್ತಿರುವ 9 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಉತ್ತರ ಪ್ರದೇಶದಲ್ಲಿ ಮಕ್ಕಳ ಮೇಲಿನ ಅಪರಾಧಗಳಿಗೆ ಕೊನೆಯೇ ಇಲ್ಲದಂತಾಗಿದೆ. ಇಲ್ಲಿನ ಮುಜಾಫರ್‌ನಗರದಲ್ಲಿ 9 ವರ್ಷದ ವಿದ್ಯಾರ್ಥಿನಿ ಮೇಲೆ ಆಕೆಯ ಶಾಲೆಯ 71 ವರ್ಷದ ಪ್ರಾಂಶುಪಾಲರೇ ಅತ್ಯಾಚಾರವೆಸಗಿದ್ದಾರೆ. ತಮ್ಮ ಮೊಮ್ಮಗಳ ವಯಸ್ಸಿನ ಹುಡುಗಿಯ ಮೇಲೆ ಅತ್ಯಾಚಾರ ನಡೆಸಿರುವ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ.
ಅಪರಾಧದ ವಿವರಗಳನ್ನು ಮರೆಮಾಚಿದ್ದಕ್ಕಾಗಿ ಅದೇ ಶಾಲೆಯ ಶಿಕ್ಷಕನನ್ನು ಹಾಗೂ ಅತ್ಯಾಚಾರ ಎಸಗಿದ ಪ್ರಾಂಶುಪಾಲರನ್ನು ಪೊಲೀಸರು ಬಂಧಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ 3ನೇ ತರಗತಿ ವಿದ್ಯಾರ್ಥಿನಿ ತೀವ್ರ ರಕ್ತಸ್ರಾವದಿಂದ ಮನೆಗೆ ಹಿಂದಿರುಗಿದ ನಂತರ ಮನೆಯವರಿಗೆ ಈ ವಿಷಯ ಗೊತ್ತಾಗಿತ್ತು. ಆಕೆ ತನ್ನ ಪೋಷಕರಿಗೆ ತನ್ನ ನೋವನ್ನು ವಿವರಿಸಿದ ನಂತರ ಅವರು ಆಕೆಯನ್ನು ವೈದ್ಯರ ಬಳಿ ಕರೆದುಕೊಂಡು ಹೋದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.
ಸಂತ್ರಸ್ತ ಬಾಲಕಿಯ ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ತಂದೆಯ ದೂರಿನ ನಂತರ ಶಾಲಾ ಪ್ರಾಂಶುಪಾಲರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
“ನನ್ನ ಮಗಳನ್ನು ಯಾವುದೋ ನೆಪದಲ್ಲಿ ತಮ್ಮ ಕೊಠಡಿಗೆ ಕರೆಸಿಕೊಂಡ ಪ್ರಾಂಶುಪಾಲರು ಆಕೆಯ ಬಟ್ಟೆಗಳನ್ನು ತೆಗೆದು, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಅರಿವಿಲ್ಲದ ನಮ್ಮ ಮಗಳು ತನಗೆ ಬಹಳ ನೋವಾಗುತ್ತಿದೆ ಎಂದು ಮನೆಗೆ ಬಂದು ನಮ್ಮ ಬಳಿ ಹೇಳಿದ್ದಳು. ಆಗ ವೈದ್ಯರ ಬಳಿ ಕರೆದುಕೊಂಡು ಹೋದಾಗ ನಮಗೆ ವಿಷಯ ಗೊತ್ತಾಯಿತು” ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಎಲ್ಲಾ ಸಂಬಂಧಿತ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
2018ರ ಸೆಪ್ಟೆಂಬರ್ ತಿಂಗಳಲ್ಲಿ ಕೂಡ ಇದೇ ರೀತಿಯ ಘಟನೆ ನಡೆದಿತ್ತು. ಬಿಹಾರದ ಫುಲ್ವಾರಿ ಷರೀಫ್ ಖಾಸಗಿ ಶಾಲೆಯ ಪ್ರಾಂಶುಪಾಲರು ಮತ್ತು ಗುಮಾಸ್ತರು 5ನೇ ತರಗತಿಯ ವಿದ್ಯಾರ್ಥಿನಿಯನ್ನು 9 ತಿಂಗಳ ಕಾಲ ಅತ್ಯಾಚಾರ ಮಾಡಿದ್ದರು. ಆ 10 ವರ್ಷದ ಬಾಲಕಿ ಗರ್ಭಿಣಿಯಾದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿರುವ ವಿಷಯ ಬೆಳಕಿಗೆ ಬಂದಿತ್ತು.