ಜೈಪುರ: 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಗುಪ್ತಾಂಗಕ್ಕೆ ಚೂಪಾದ ವಸ್ತುವನ್ನು ಹಾಕಿ ಹಿಂಸೆ ಮಾಡಿ ಮೇಲ್ಸೇತುವೆಯಿಂದ ಎಸೆದಿರುವ ಪೈಶಾಚಿಕ ಹೀನ ಕೃತ್ಯ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.
“ವೈದ್ಯರು ಆಕೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಇದೀಗ ಆಕೆ ಅಪಾಯದಿಂದ ಪಾರಾಗಿದ್ದಾಳೆ” ಎಂದು ರಾಜಸ್ಥಾನದ ಸಚಿವ ಪರ್ಸಾದಿ ಲಾಲ್ ಮೀನಾ ತಿಳಿಸಿದ್ದಾರೆ. ಅಪ್ರಾಪ್ತ ಬಾಲಕಿಯ ದೇಹದ ಖಾಸಗಿ ಭಾಗಗಳಿಗೆ ಚೂಪಾದ ವಸ್ತುಗಳನ್ನು ಹಾಕಿ ಹಿಂಸೆ ನೀಡಲಾಗಿದೆ. ಇದರಿಂದ ಆಕೆಯ ಗುಪ್ತಾಂಗಗಳಿಗೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಸಂತ್ರಸ್ತ ಬಾಲಕಿ ವಿಶೇಷಚೇತನಳಾಗಿದ್ದು, ಅಲ್ವಾರ್‌ನ ತಿಜಾರಾ ಫ್ಲೈ ಓವರ್ನ ಕೆಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ನೋಡಿ ಪೊಲೀಸರಿಗೆ ವಿಷಯ ತಿಳಿಸಲಾಗಿತ್ತು.
ತಕ್ಷಣ ಆ ಬಾಲಕಿಯನ್ನು ಅಲ್ವಾರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ವೈದ್ಯರು ಆ ಬಾಲಕಿಯ ರಕ್ತಸ್ರಾವವನ್ನು ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೈಪುರದ ಜೆಕೆ ಲೋನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸುಮಾರು ಎರಡೂವರೆ ಗಂಟೆಗಳ ಕಾಲ ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.
ಗುಪ್ತಾಂಗಕ್ಕೆ ತೀವ್ರವಾಗಿ ಗಾಯಗೊಂಡಿರುವ ಬಾಲಕಿಯನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ಆ ಬಾಲಕಿಯ ದೇಹದ ಖಾಸಗಿ ಅಂಗಗಳಿಗೆ ಆಳವಾದ ಗಾಯಗಳಾಗಿವೆ. ವೈದ್ಯರು ಬಾಲಕಿಯ ಸ್ಥಿತಿಯನ್ನು ಗಮನಿಸುತ್ತಿದ್ದಾರೆ ಎಂದು ಜೈಪುರದ ಜೆಕೆ ಲೋನ್ ಆಸ್ಪತ್ರೆಯ ಡಾ. ಅರವಿಂದ್ ಶುಕ್ಲಾ ತಿಳಿಸಿದ್ದಾರೆ.
The doctors have successfully operated on her and she is out of danger now. SIT has been set up to probe the matter. The accused will be arrested and brought to justice at the earliest: Rajasthan Minister Parsadi Lal Meena pic.twitter.com/GWdPTYVKxy
— ANI (@ANI) January 13, 2022
ಪೊಲೀಸರು ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಘಟನೆ ನಡೆದ 25 ಕಿಮೀ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ 300ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದ್ದು, ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಲಾಗುವುದು ಎಂದು ಪರ್ಸಾದಿ ಲಾಲ್ ಮೀನಾ ಹೇಳಿದ್ದಾರೆ.
ಆರೋಪಿಗಳನ್ನು ಶೀಘ್ರವೇ ಹಿಡಿಯಲಾಗುವುದು ಎಂದಿರುವ ರಾಜಸ್ಥಾನದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮಮತಾ ಭೂಪೇಶ್, ಬಾಲಕಿಯ ಕುಟುಂಬಕ್ಕೆ 6 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. 6 ಲಕ್ಷದಲ್ಲಿ 5 ಲಕ್ಷ ರೂ.ಗಳನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು 1 ಲಕ್ಷವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನೀಡಲಿದೆ. ಹಾಗೇ, ರಾಜಸ್ಥಾನದ ಸಾಮಾಜಿಕ ನ್ಯಾಯ ಸಚಿವ ಟಿಕಾರಾಂ ಜೂಲಿ ಅಲ್ವಾರ್‌ನಲ್ಲಿ ಸಂತ್ರಸ್ತೆಯ ಕುಟುಂಬ ಸದಸ್ಯರಿಗೆ 3.5 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ.