ಕೋಝಿಕೋಡು: ಕೋಝಿಕ್ಕೊಡ್ ಜಿಲ್ಲೆಯ ಕೈತಪೊಯಿಲ್‌ನಲ್ಲಿರುವ ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದ್ದು ಇಪ್ಪತ್ತಕ್ಕೂ ಅಧಿಕ ಮಂದಿ ಗಾಯಗೊಂಡ ಬಗ್ಗೆ ವರದಿಯಾಗಿದೆ.
ಇಂದು (ಮಂಗಳವಾರ) ಮಧ್ಯಾಹ್ನದ ವೇಳೆ ಈ ಘಟನೆ ನಡೆದಿದ್ದು, ಸುಮಾರು ಇಪ್ಪತ್ತು ಮಂದಿ ಗಾಯಗೊಂಡಿದ್ದಾರೆ. ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಗಾಯಗೊಂಡವರು ಕಟ್ಟಡ ಕಾರ್ಮಿಕರಾಗಿದ್ದು, ಅವರನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.
ಖಾಸಗಿ ಶಾಲೆಯ ಕಟ್ಟಡ ನಿರ್ಮಾಣದ ವೇಳೆ ಈ ಅವಘಡ ಸಂಭವಿಸಿದೆ. ಮೊದಲ ಅಂತಸ್ತಿನ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿತ್ತು, ಪಿಲ್ಲರ್ ಜಾರಿ ಬಿದ್ದು ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಕಟ್ಟಡದ ಕುಸಿದ ಭಾಗಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸರ ಸಹಾಯದಿಂದ ತೆಗೆಯಲಾಗುತ್ತಿದೆ.
ಕಾಂತಪುರಂ ಎಪಿ ಅಬೂಬಕರ್ ಉಸ್ತಾದ್ ನೇತೃತ್ವದ ಟ್ರಸ್ಟ್‌ಗೆ ಸೇರಿದ ಕಟ್ಟಡ ಇದಾಗಿದ್ದು, ಮಸೀದಿ, ಕಾನೂನು ಕಾಲೇಜು ಸೇರಿದಂತೆ ವಿವಿಧ ಕಟ್ಟಡ ಇರುವ ಜಾಗದಲ್ಲಿ ಅವಘಡ ಸಂಭವಿಸಿದೆ.