';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
‘ಅಮ್ಮ’
ಅದ್ಯಾವತ್ತೋ ಅಪ್ಪ
ಕೊಡಿಸಿದ್ದ ಬೆಂಡೋಲೆಗಳಿಗೆ
ಮತ್ತೆ ಮತ್ತೆ ಒಪ್ಪ ಹಾಕಿಸಿ
ಧರಿಸಿ ಬದುಕಿನ ದಿನಗಳ ಕಳೆದ
ಅಮ್ಮನಿಗೆ ಕಿವಿಗಳ ತುಂಬಾ
ಕಿಲಕಿಲವೆನ್ನುವ ಅಲಿಕತ್ತು
ತೊಡಿಸುವ ಮಹದಾಸೆ ನನಗಿತ್ತು.
ಹಗಲಿರುಳಿನ ಪರಿವೆಯಿಲ್ಲದೆ
ಮಡಿಲಿನ ಮೇಲೆ ಮೊರವನ್ನಿರಿಸಿ
ಬೀಡಿಗಳ ಸುರುಟಿ ಸವೆದಿದ್ದ
ಅವಳ ಕರಗಳಿಗೆ ಸ್ವಲ್ಪ ಬಿಡುವು
ನೀಡಬೇಕೆಂಬ ಇರಾದೆಯಿತ್ತು.
ಬದುಕಿನ ಬವಣೆಗಳಿಗೆ
ನಲುಗಿ ಹೆಣಗಾಡಿ ಸೋಲುತ್ತಿದ್ದ
ಅಮ್ಮನ ಬಾಡಿದ ಮೊಗದಲ್ಲಿ
ಗೆಲುವಿನ ನಗೆ ಅರಳಿಸಬೇಕೆಂದು
ಅಂದೇ ಪಣತೊಟ್ಟಿದ್ದೆ ನಾನು,
ಏಳುಬೀಳುಗಳಿಗೆ ತಲೆಬಾಗಿ
ಬಾಳಿನ ಜೋಳಿಗೆಯ ತುಂಬಿಸಲು
ಕಲ್ಲುಮುಳ್ಳಿನ ಹಾದಿ ತುಳಿದಿದ್ದ
ಅವಳ ಪಾದಗಳಿಗೆ ತುಸು ವಿರಾಮ
ದೊರಕಿಸಬೇಕೆಂಬ ಹಂಬಲವಿತ್ತು.
ಬೆಟ್ಟದಂತೆ ಬೆಳೆಯುತ್ತಿದ್ದ
ಸವಾಲುಗಳ ಸರಮಾಲೆಯ ಮಧ್ಯೆ
ಹೊಟ್ಟೆ ತುಂಬಿಸಿ ಸಾಕಿ ಬೆಳೆಸಿದ
ಅಮ್ಮ ನನ್ನ ರಟ್ಟೆಗಳು ಬಲಿತು
ಗಟ್ಟಿಯಾಗುವವರೆಗೆ ಕಾಯಲೇ ಇಲ್ಲ,
ಬದುಕಿನ ಪಯಣದಲ್ಲಿ
ನೋವಿನ ಬುತ್ತಿಯನ್ನೇ ಉಂಡ
ಅವಳ ಕೊನೆಯ ದಿನಗಳಲ್ಲಿಯೂ
ಸಂತಸದ ಸವಿಯುಣಿಸಲು
ನನ್ನಿಂದೊಮ್ಮೆಯೂ ಆಗಲೇ ಇಲ್ಲ.
~ಸವಣೂರಿಗ